ಬೆಂಗಳೂರು,ಜ.5- ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ನವಬೆಂಗಳೂರು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಜಯನಗರದಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಒಡೆತನದ ಜಿ.ಎಂ.ಗ್ರೂಪ್ ಹಾಗೂ ಅದ್ವೈತ್ ಗ್ರೂಪ್‍ನಿಂದ ನೂತನವಾಗಿ ನಿರ್ಮಾಣವಾಗಲಿರುವ ಫೈವ್ ಬಿಸಿನೆಸ್ ಬೆ ವಾಣಿಜ್ಯ ಸಮುಚ್ಛಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸಿಲಿಕಾನ್ ವ್ಯಾಲಿ ಎಂದೇ ಬೆಂಗಳೂರಿನಲ್ಲಿ ನವಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆಯನ್ನು ಸಿದ್ದಪಡಿಸಲಾಗುವುದು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಸಹ ಸರ್ಕಾರ ನೀಡಲಿದೆ ಎಂದು ತಿಳಿಸಿದರು. ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪನವರ ಅಕಾರಾವಯಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಕೊಟ್ಟಿದ್ದರು. ಇದು ಅವರ ಮಾರ್ಗದರ್ಶನದಲ್ಲಿ ನವ ಬೆಂಗಳೂರು ನಿರ್ಮಾಣವಾಗಲಿದೆ. ಈ ನಗರವನ್ನು ಅಭಿವೃದ್ಧಿಪಡಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಕೋವಿಡ್ ನಂತಹ ಸಂದರ್ಭದಲ್ಲೂ ಬೆಂಗಳೂರಿನ ಐಟಿ ಕಂಪನಿಗಳು ದೇಶದ ಆರ್ಥಿಕ ಚಟುವಟಿಕೆಗೆ ಸಾಕಷ್ಟು ಕೊಡುಗೆಯನ್ನು ನೀಡಿವೆ. ದೇಶದಲ್ಲಿ ಒಟ್ಟು ವಿದೇಶಕ್ಕೆ ಆಮದಾಗುವ ಐಟಿಯಲ್ಲಿ ಕರ್ನಾಟಕದಿಂದಲೇ ಶೇ.40ರಷ್ಟು ಆಮದಾಗುತ್ತಿದೆ ಎಂದು ಪ್ರಶಂಸಿಸಿದರು.
ಬೆಂಗಳೂರು ಐಟಿ ಇಂಡಸ್ಟ್ರೀಸ್‍ಗೆ ನಮ್ಮ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ. ಜನರ ಕೈಯಲ್ಲಿ ಉದ್ಯೋಗ ಬೇಕು. ಅಂತಹ ಉದ್ಯೋಗ ನೀಡುವಲ್ಲಿ ಸಿದ್ದೇಶ್ವರ ಕುಟುಂಬ ಯಾವತ್ತೂ ಮುಂದು ದೇಶದಲ್ಲೇ ಬೆಂಗಳೂರು ಆರ್ಥಿಕವಾಗಿ ಬೆಳವಣಿಗೆಯಿಂದ ಸಾಕಷ್ಟು ಸಹಾಯವಾಗಿದೆ. ಕೋವಿಡ್ ಮುಗಿದರೂ ಬೆಂಗಳೂರು ಅಭಿವೃದ್ಧಿಗೆ ಅದ್ವಿತೀಯ ಹಾಗೂ ಜಿಎಮ್ ಗ್ರೂ ಬಹಳಷ್ಟು ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಸಿದ್ದೇಶ್ವರ್ ಅವರು ಬೆಂಗಳೂರು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಬಹಳಷ್ಟು ಕೆಲಸ ಕಾರ್ಯ ಮಾಡಿದ್ದಾರೆ. ಅವರ ಕುಟುಂಬ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ನಮ್ಮ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಕೂಡ ಮಾಡಿದ್ದಾರೆ.
ಇಂದು ಉದ್ಘಾಟನೆ ಆಗುತ್ತಿರುವ ಐಟಿ ಕಂಪನಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಹಲವಾರು ತೊಂದರೆ ಎದುರಾಗಿತ್ತು. ಇದೀಗ ಶಿಲಾನ್ಯಾಸ ಮಾಡಿದ್ದಾರೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದರಿಂದ ಸಾಕಷ್ಟು ಜನರಿಗೆ ಕೆಲಸ ಸಿಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಿವಕುಮಾರ ಉದಾಸಿ, ಸಚಿವರಾದ ಆರ್.ಅಶೋಕ, ಮುರುಗೇಶ್ ನಿರಾಣಿ, ಬೈರತಿ ಬಸವರಾಜ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ಇತರರು ಉಪಸ್ಥಿತರಿದ್ದರು.
