ಬೆಂಗಳೂರು.ಜು.17- ಹಾಲಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಲ್ಲ. ಆದರೆ ಹಾಲಿನ ಉತ್ಪನ್ನಗಳು ದರ ಏರಿಕೆಯಾಗಲಿದೆ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳ ಕೆಎಂಎಫ್ ತಿಳಿಸಿದೆ. ಕೇಂದ್ರ ಸರ್ಕಾರ ಶೇ.5ರ ಸರಕು ಸೇವಾ ಸುಂಕ (ಹಾಲಿನ ಪ್ಯಾಕೇಟ್ ಉತ್ಪನ್ನ) ವಿಧಿಸಿರುವ ಹಿನ್ನೆಲೆಯಲ್ಲಿ (ಲೇಬಲ್ಡ್ ಅಕ್ಕಿ ಇತರೆ) ನಾಳೆಯಿಂದ ಬೆಲೆ ಹೆಚ್ಚಳವಾಗಲಿದೆ.
ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಪ್ರತಿ ಉತ್ಪನ್ನದ ಮೇಲೆ ಸರಾಸರಿ 1ರಂದ 3ರವರೆಗೆ ಬೆಲೆ ಹೆಚ್ಚಾಗಲಿದೆ. ಈ ಮೊದಲು ಲೀಟರ್ ಮೊಸರಿಗೆ 43 ಇತ್ತು. ನಾಳೆಯಿಂದ (ಜುಲೈ 18) ಅದು 46 ಆಗಲಿದೆ. ಅರ್ಧ ಲೀಟರ್ ಮೊಸರಿನ ಬೆಲೆ 22 ಇತ್ತು. ನಾಳೆಯಿಂದ 24 ಆಗಲಿದೆ. ಮಜ್ಜಿಗೆ 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಮೇಲೆ 1ರೂ. ಹೆಚ್ಚಿಸಲಾಗಿದೆ. ಪಾಕೆಟ್‍ನಲ್ಲಿ ಸದ್ಯ ಹಳೆಯ ದರಗಳೇ ನಮೂದಾಗಿರುತ್ತವೆ. ಆದರೆ, ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ತಿಳಿಸಿದೆ.
ಜೂನ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‍ಟಿ ಮಂಡಳಿಯ 47ನೇ ಸಭೆಯು ಹಾಲಿನ ಉತ್ಪನ್ನಗಳು ಹಾಗೂ ಆಹಾರ ಧಾನ್ಯಗಳಿಗೆ ನೀಡಿದ್ದ ವಿನಾಯಿತಿ ತೆಗೆದುಹಾಕಲು ನಿರ್ಣಯ ತೆಗೆದುಕೊಂಡಿತ್ತು. ಈ ಪರಿಷ್ಕರಣೆಯು ನಾಳೆಯಿಂದಲೇ (ಜುಲೈ 18) ಜಾರಿಗೆ ಬರಲಿದೆ.
ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಭಾರತೀಯರು ಮುಂದಿನ ದಿನಗಳಲ್ಲಿ ತಮ್ಮ ಅಡುಗೆಮನೆ ಬಜೆಟ್ ಅನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಜಿಎಸ್‍ಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಹಾಲು ಸಂಸ್ಕರಣೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ಸಿದ್ಧವಾಗಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ಖಾಸಗಿ ಡೇರಿ ಕಂಪನಿಗಳಾದ ದೊಡ್ಲಾ ಮತ್ತು ಹೆರಿಟೇಜ್ ಸಹ ಹಾಲಿನ ಉತ್ಪನ್ನ ಗಳ ಬೆಲೆ ಹೆಚ್ಚಿಸಲಿವೆ ಎಂದು ಹೇಳಲಾಗಿದೆ.