ಬಿಗ್ ನ್ಯೂಸ್ : ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಪ್ರತ್ಯೇಕ ಮಾರ್ಗಸೂಚಿ..!

ಬೆಂಗಳೂರು,ಡಿ.25-ಬ್ರಿಟನ್‍ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಗೊಂಡ ಕೊರೊನಾ ಸೋಂಕು ಹಬ್ಬುವುದನ್ನು ತಡೆಗಟ್ಟುವ ಕಾರಣ ರಾಜಧಾನಿ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.  ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿಯನ್ನು ತಡೆಗಟ್ಟುವ ಕಾರಣಕ್ಕಾಗಿ ನಾಳೆ ಅಥವಾ ನಾಡಿದ್ದು ಹೊಸ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಇದರಿಂದ ಜ.31ರಂದು ರಾತ್ರಿ ಮೋಜುಮಸ್ತಿ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದ ಪಾನಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶಾಕ್ ಕೊಟ್ಟಿದೆ.  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ರಾಜಧಾನಿ ಬೆಂಗಳೂರಿಗೆ ಪ್ರತ್ಯೇಕವಾದ ಮಾರ್ಗಸೂಚಿ ಹೊರಡಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಸೂಚನೆ ಕೊಡಲಾಗಿದೆ.

ನೈಟ್ ಕಫ್ರ್ಯೂ ಇಲ್ಲದೇ ಇದ್ದರೂ ಕೆಲವು ಕಠಿಣ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗುವುದು. ಸೋಂಕು ಒಬ್ಬರಿಂದ ಒಬ್ಬರಿಗೆ ತಡೆಗಟ್ಟಲು ಇದು ಅನಿವಾರ್ಯ ಎಂದರು. ರಾಜ್ಯ ಸರ್ಕಾರ ಅನಿವಾರ್ಯ ಕಾರಣಗಳಿಂದಾಗಿ ನೈಟ್ ಕಫ್ರ್ಯೂ ಹಿಂಪಡೆದಿದ್ದೇವೆ. ಹಾಗಂದ ಮಾತ್ರಕ್ಕೆ ಮನಸೋ ಇಚ್ಛೆ ಮೋಜುಮಸ್ತಿ ಮಾಡಲು ಅವಕಾಶವಿಲ್ಲ.

ಡಿ.31 ಹಾಗೂ ಜ.1ರಂದು ಕೆಲವೊಂದು ಕಠಿಣ ನಿಯಮಗಳನ್ನು ಗೃಹ ತೆಗೆದುಕೊಳ್ಳಲಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ಕೊಡಬೇಕೆಂದು ಮನವಿ ಮಾಡಿದರು. ಬಾರ್, ಪಬ್, ರೆಸ್ಟೋರೆಂಟ್ ಸೇರಿದಂತೆ ಮತ್ತಿತರ ಕಡೆ ಅನಿವಾರ್ಯವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಾಧ್ಯವಾದರೆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಚಿಂತನೆಯೂ ಇದೆ. ಹೆಚ್ಚಿನ ಜನರು ಒಂದೆಡೆ ಸೇರುವುದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಬಹುದು. ಈಗಾಗಲೇ ದೀಪಾವಳಿ, ದಸರಾ ಸಂದರ್ಭದಲ್ಲಿ ನಾವು ಸರಳವಾಗಿ ಆಚರಣೆ ಮಾಡಿದ್ದೇವೆ. ಈಗಲೂ ಅದೇ ಸಹಕಾರ ನೀಡಬೇಕಾಗುತ್ತದೆ ಎಂದು ಹೇಳಿದರು.