ನೀರೀನ ದುರ್ಬಳಕೆ ತಪ್ಪಿಸಲು ನೂತನ ಜಲ ನೀತಿ

Social Share

ಬೆಂಗಳೂರು,ಆ.21- ರಾಜ್ಯದ ನೀರಿನ ಬವಣೆ ನೀಗಿಸಲು ಮತ್ತು ಸಂರಕ್ಷಿಸಲು ಅನಗತ್ಯವಾಗಿ ನೀರನ್ನು ದುರ್ಬಳಕೆ ಮಾಡುವವರಿಗೆ ದಂಡ ವಿಧಿಸುವ ಅವಕಾಶವನ್ನು ನೂತನ ಜಲನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಆ.12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2022ರ ಕರ್ನಾಟಕ ಜಲನೀತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ನೆರೆಯಿಂದ ಸೃಷ್ಟಿಯಾಗುವ ಪ್ರವಾಹದ ನೀರನ್ನು ಸಂರಕ್ಷಿಸಿ ಬಳಕೆ ಮಾಡಿಕೊಳ್ಳುವ ಪ್ರಸ್ತಾವಿತ ಯೋಜನೆಗಳನ್ನು ಒಳಗೊಂಡಂತೆ ನೂತನ ಜಲನೀತಿಗೆ ಅಂಗೀಕಾರ ನೀಡಲಾಗಿದೆ. ಈ ನೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ವಾರ್ಷಿಕ 1072 ಕ್ಯೂಬಿಕ್ ಮೀಟರ್ ನೀರು ಸರಬರಾಜು ಮಾಡುವ ಖಾತ್ರಿ ನೀಡಲಾಗಿದೆ.

2002ರ ಜಲನೀತಿಯಲ್ಲಿ ಗ್ರಾಮೀಣ ಭಾಗದವರಿಗೆ 55 ಲೀಟರ್, ಪಟ್ಟಣ ಪ್ರದೇಶದಲ್ಲಿ 70, ನಗರ ಪ್ರದೇಶದಲ್ಲಿ 100 ಲೀಟರ್, ಪಾಲಿಕೆ ವ್ಯಾಪ್ತಿಯಲ್ಲಿ 135 ಲೀಟರ್ ನೀರು ಸರಬರಾಜು ಮಾಡುವ ಖಾತ್ರಿ ನೀಡಲಾಗಿತ್ತು. ನೂತನ ಜಲನೀತಿಯಲ್ಲಿ ಅದರ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಗರಿಷ್ಠ 1608 ಕ್ಯೂಬಿಕ್ ಮೀಟರ್ ನೀರು ಪಡೆಯುವ ನೀರು ಪಡೆಯುವ ಅವಕಾಶವನ್ನು ರಾಜ್ಯದ ಜನ ಹೊಂದಿದ್ದಾರೆ.

ಕರ್ನಾಟಕ ಪ್ರಕೃತಿಯ ವೈವಿಧ್ಯಗಳಲ್ಲಿ ಹೆಚ್ಚು ಗಮನ ಸೆಳೆಯುತ್ತದೆ. ಕಳೆದ 20 ವರ್ಷಗಳಲ್ಲಿ 15 ವರ್ಷಗಳನ್ನು ಬರದಲ್ಲೇ ಕಳೆದಿದೆ. ಶೇ.61ರಷ್ಟು ಭಾಗ ಬರಪೀಡಿತ ಪ್ರದೇಶವನ್ನು ಒಳಗೊಂಡಿದೆ. ನೀರಿನ ಬವಣೆ ಎದುರಿಸುತ್ತಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕವೂ ಪ್ರಮುಖವಾಗಿದೆ.

ಈಗಿನಿಂದಲೇ ನೀರಿನ ರಕ್ಷಣೆ ಮತ್ತು ಮಿತಬಳಕೆಯನ್ನು ಅನುಸರಿಸದಿದ್ದರೆ ಭವಿಷ್ಯದಲ್ಲಿ ಪ್ರತಿ ಹನಿಗೂ ಪರದಾಡಬೇಕಾದ ಆತಂಕವಿದೆ. ಹೀಗಾಗಿ ಸಚಿವ ಸಂಪುಟ ಸಭೆ ಅನಗತ್ಯ ನೀರು ವೆಚ್ಚ ಮಾಡುವವರಿಗೆ ದಂಡದ ಮೂಲಕ ಕಡಿವಾಣ ಹಾಕುವ ಪ್ರಯತ್ನ ಮಾಡಿದೆ.

ರಾಜ್ಯದಲ್ಲಿ ಬರದ ಪ್ರಮಾಣ ಇತ್ತೀಚೆಗೆ ತೀವ್ರವಾಗುತ್ತಿದೆ. ಅದೇ ರೀತಿ ಕೆಲವು ಆಯ್ದ ಜಿಲ್ಲೆಗಳಲ್ಲಿ ಮಳೆ ಅಥವಾ ನೆರೆ ಪ್ರವಾಹ 10ರಿಂದ 20 ಪಟ್ಟು ಹೆಚ್ಚಾಗಿದೆ. ಅಂತರ್ಜಲದ ನೀರಿನ ಬಳಕೆ ಶೇ.26ರಷ್ಟಿದ್ದು, 15 ಜಿಲ್ಲೆಗಳ 52 ತಾಲ್ಲೂಕುಗಳಲ್ಲಿ ವ್ಯಾಪಕ ಬಳಕೆಯಾಗಿದೆ, 8 ಜಿಲ್ಲೆಗಳ 10 ತಾಲ್ಲೂಕುಗಳಲ್ಲಿ ಸಂಕಷ್ಟ ಪರಿಸ್ಥಿತಿ ಇದೆ. 17 ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಸಾಧಾರಣ ಸಂಕಷ್ಟ ಪರಿಸ್ಥಿತಿ ಇದೆ.

2030ರ ವೇಳೆಗೆ ಕೃಷಿ ಶೇ.84ರಷ್ಟು ನೀರನ್ನು ಬಳಕೆ ಮಾಡಿಕೊಳ್ಳಲಿದ್ದು, ನೀರಿನ ಬಳಕೆ ಪ್ರಮಾಣ 1591 ಟಿಎಂಸಿಯಷ್ಟಾಗಲಿದೆ ಎಂಬ ಅಂದಾಜಿದೆ. 2021ರಲ್ಲಿ ರಾಜ್ಯದ ಆಂತರಿಕ ಉತ್ಪಾದನೆಯಲ್ಲಿ ನೀರಿನ ಪಾತ್ರ ಪ್ರಮುಖವಾಗಿದೆ. ಕೃಷಿ, ಕೈಗಾರಿಕೆ, ಉದ್ಯೋಗ ಸೃಷ್ಟಿಯಲ್ಲಿ ನೀರಿನ ಬಳಕೆ ಹೆಚ್ಚುತ್ತಿದೆ. ಅದೇ ವೇಳೆ ಅಂತರ್ಜಲ ದುರ್ಬಳಕೆ ಆಗುತ್ತಿರುವುದರಿಂದ ಒಣಪ್ರದೇಶಗಳು ನಿರ್ಮಾಣವಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಅನಗತ್ಯ ವೆಚ್ಚವನ್ನು ತಗ್ಗಿಸಲು ಮುಂದಾಗಿದೆ.

Articles You Might Like

Share This Article