ಹೊಸ ಸಚಿವರಿಗೆ ಖಾತೆ ಹಂಚಿಕೆ ಇನ್ನೂ ವಿಳಂಬ

Spread the love

ಬೆಂಗಳೂರು,ಜ.19- ಸಾಕಷ್ಟು ಅಳೆದುತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿದರೂ ಕೆಲವರು ತಮಗೆ ಇಂಥದ್ದೇ ಖಾತೆ ನೀಡಬೇಕೆಂದು ಪಟ್ಟು ಹಿಡಿದಿರುವುದರಿಂದ ಖಾತೆ ಹಂಚಿಕೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.  ಸಂಪುಟ ವಿಸ್ತರಣೆಯಾಗಿ ಸರಿಸುಮಾರು ಏಳು ದಿನಗಳು ಕಳೆದರೂ ನೂತನ ಸಚಿವರಿಗೆ ಈವರೆಗೂ ಖಾತೆಗಳ ಹಂಚಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿಲ್ಲ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಬಂದು ಹೋದ ನಂತರ ಸಚಿವರಿಗೆ ಖಾತೆಗಳು ಹಂಚಿಕೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಇದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳೇ ಹೆಚ್ಚು.  ಉಡುಪಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇಂದು ಪಕ್ಷದ ಮುಖಂಡರ ಜೊತೆ ಚರ್ಚಿಸಿದ ಬಳಿಕವೇ ನಿಗದಿಯಾಗಲಿದೆ.

ಸಂಪುಟ ವಿಸ್ತರಣೆ ಹಾಗೂ ಅಸಮಾಧಾನ ಸ್ಫೋಟದ ನಡುವೆ ಖಾತೆ ಕ್ಯಾತೆ ಕೂಡಾ ಶುರುವಾಗಿದೆ. ನೂತನ ಸಚಿವರು ಪ್ರಮುಖ ಖಾತೆಗಳತ್ತ ಕಣ್ಣಿಟ್ಟಿದ್ದು ಖಾತೆ ಹಂಚಿಕೆ ಮಾಡುವುದು ಸಿಎಂ ಯಡಿಯೂರಪ್ಪ ಪಾಲಿಗೆ ಹೊಸ ಸವಾಲಾಗಿ ಪರಿಣಮಿಸಿದೆ.  ಸದ್ಯ ಹಂಚಿಕೆ ಆಗದೆ ಉಳಿದಿರುವ ಖಾತೆಗಳನ್ನು ನೂತನ ಸಚಿವರಿಗೆ ನೀಡಲಾಗುತ್ತದಾ ಅಥವಾ ಮಹತ್ವದ ಬದಲಾವಣೆಗಳು ನಡೆಯಲಿದ್ಯಾ ಎಂಬುದು ಕುತೂಹಲ ಕೆರಳಿಸಿದೆ.

ಮೂಲಗಳ ಪ್ರಕಾರ ಈ ಬಾರಿ ಕೆಲವು ಸಚಿವರ ಖಾತೆಗಳು ಅದಲುಬದಲಾಗುವ ಸಂಭವವಿದೆ. ಸಚಿವರ ಖಾತೆಗಳಲ್ಲೇ ಬದಲಾವಣೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವ ಹಲವು ಆಕಾಂಕ್ಷಿಗಳಿಂದಾಗಿ ಖಾತೆ ಹಂಚಿಕೆ ಕಬ್ಬಿಣದ ಕಡಲೆಯಾಗಿದೆ. ತಮ್ಮ ಬಳಿಯಿರುವ ಖಾತೆಗಳನ್ನೆ ಸಿಎಂ ನೀಡಲಿದ್ದಾರೆ ಎಂದು ಹೊಸಬರು ಭರವಸೆ ವ್ಯಕ್ತ ಪಡಿಸಿದ್ದಾರೆ.

ಆದರೆ ಅಸಮತೋಲನ ನಿವಾರಿಸಲು ಬಿಜೆಪಿಯ ಹಳಬರಿಗೆ ಮಹತ್ವದ ಖಾತೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೆ 8 ಸಚಿವರಿದ್ದಾರೆ. ಡಾ ಸಿ. ಎನ್ ಅಶ್ವಥ್‍ನಾರಾಯಣ್, ಅರವಿಂದ್ ಲಿಂಬಾವಳಿ ಮತ್ತು ಆರ್ ಅಶೋಕ್ -ಮಹತ್ವದ ಖಾತೆಗಾಗಿ ಪೈಪೋಟಿ ನಡೆಸಿದ್ದಾರೆ.

ಹೊಸಬರಿಗೆ ಆದ್ಯತೆ ನೀಡಲಾಗುತ್ತಿರುವ ಬಗ್ಗೆ ಪಕ್ಷದಲ್ಲಿನ ನಾಯಕರ ಮನಸ್ಥಿತಿಯನ್ನು ಗಮನಿಸಿದರೆ, ಖಾತೆ ಮರುಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿಯವರಿಗೆ ಸಮನ್ವಯತೆ ಕಾಪಾಡಿಕೊಳ್ಳುವುದು ಪ್ರಮುಖ ಸವಾಲಾಗಿದೆ. ಪಕ್ಷದ ಹಳಬರಿಗೆ ಕೆಲವು ಪ್ರಮುಖ ಖಾತೆ ನೀಡುವ ಸಾಧ್ಯತೆಯಿದೆ, ಹಣಕಾಸು, ಡಿಪಿಎಆರ್ ಮತ್ತು ಗುಪ್ತಚರ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾತೆಗಳನ್ನು ಹಂಚಿಕೆ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಆರ್.ಅಶೋಕ್ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಅಶ್ವತ್ಥ ನಾರಾಯಣ ಅವರನ್ನು ಈಗಾಗಲೇ ಡಿಸಿಎಂ ಮಾಡಲಾಗಿದೆ, ಹಾಗಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಅವರಿಗೆ ಸೂಕ್ತ ವಾಗುವುದಿಲ್ಲ, ಈ ಹಿಂದೆ ಡಿಸಿಎಂ ಆಗಿದ್ದ ಆರ್. ಅಶೋಕ್ ಕಂದಾಯ ಖಾತೆ ನಿರ್ವಹಿಸುತ್ತಿದ್ದಾರೆ, ಹಾಗಾಗಿ ಕಳೆದ ಒಂದೂ ವರೆ ವರ್ಷದಿಂದ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಅರವಿಂದ ಲಿಂಬಾವಳಿ ಅವರಿಗೆ ನಗರಾಭಿವೃದ್ಧಿ ನೀಡಬಹುದು ಎಂದು ಹೇಳಲಾಗುತ್ತಿದೆ, ಇನ್ನು ಯಡಿಯೂರಪ್ಪ ನಿಷ್ಠ ಎಂದೇ ಹೇಳಲಾಗುತ್ತಿರುವ ಸೋಮಣ್ಣ ಕೂಡ ಮುಂಚೂಣಿಯಲ್ಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾ ನೇಮಕವಾಗಿರುವ ಸಿ.ಪಿ.ಯೋಗೇಶ್ವರ್ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದು, ಮುರುಗೇಶ್ ನಿರಾಣಿ ಅಬಕಾರಿ ಖಾತೆ ಬಯಸಿದ್ದಾರೆ. ನೂತನವಾಗಿ ಬಿಎಸ್‍ವೈ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಸಚಿವರು ಪ್ರಮುಖ ಖಾತೆಗಳತ್ತ ಕಣ್ಣಿಟ್ಟಿದ್ದಾರೆ. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್ ಪ್ರಮುಖ ಖಾತೆಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಖಾತೆ ಹಂಚಿಕೆ ಮಾಡುವುದು ಕೂಡಾ ಬಿಎಸ್‍ವೈ ಪಾಲಿಗೆ ಸವಾಲಿನ ಸಂಗತಿಯಾಗಿದೆ. ಖಾತೆಗಳ ಹಂಚಿಕೆ ಕುರಿತಾಗಿ ಬಿಎಸ್‍ವೈಗೆ ಪರಮಾಧಿಕಾರವಿದ್ದು ಹೈಕಮಾಂಡ್ ಕೂಡಾ ಈ ವಿಚಾರವನ್ನು ಸಿಎಂ ವಿವೇಚನೆಗೆ ಬಿಟ್ಟಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಳಿ ಹಣಕಾಸು, ಇಂಧನ, ಬೆಂಗಳೂರು ಅಭಿವೃದ್ಧಿಯಂತಹ ಪ್ರಮುಖ ಖಾತೆಗಳಿವೆ. ಇದು ಅವರಲ್ಲೇ ಮುಂದುವರಿಯಲಿದೆ. ಉಳಿದಂತೆ ಹೆಚ್ಚುವರಿಯಾಗಿ ಇರುವ ಸಣ್ಣ ಕೈಗಾರಿಕೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಸಬಲೀಕರಣ, ಕ್ರೀಡೆ, ಅಬಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳನ್ನು ಹಂಚಿಕೆ ಮಾಡಬೇಕಿದೆ. ಜೊತೆಗೆ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರ ಬಳಿಯೂ ಹೆಚ್ಚುವರಿ ಖಾತೆಗಳಿವೆ.

Facebook Comments