ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಂಡುಬಂತು ಸ್ವಾರಸ್ಯಕರ ಸನ್ನಿವೇಶ

Social Share

ಬೆಂಗಳೂರು, ಜ.6- ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ವಿಧಾನ ಪರಿಷತ್‍ನ ನೂತನ ಸದಸ್ಯರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಕೋವಿಡ್ ನಿಯಮಗಳ ಸಂಪೂರ್ಣ ಉಲ್ಲಂಘಟನೆ ಕಂಡು ಬಂತು.
ಪುನರಾಯ್ಕೆಯಾಗಿರುವ ವಿಧಾನ ವಿಧಾನ ಪರಿಷತ್‍ನ ಉಪಸಭಾಪತಿ ಪ್ರಾಣೇಶ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರಿಸಿದರೆ, ಪರಿಷತ್‍ನ ಹಾಲಿ ಸಭಾನಾಯಕ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭಗವಂತ ಹಾಗೂ ದಿವಂಗತ ವಿ.ಎಸ್.ಆಚಾರ್ಯ ರವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಸದಸ್ಯರಾದ ಲಖನ್ ಜಾರಕಿಹೊಳಿ, ಸಲೀಂ ಅಹಮದ್, ಪ್ರದೀಪ್ ಶೆಟ್ಟರ್, ವೈ.ಎಂ.ಸತೀಶ್, ನವೀನ್ ಕೆ.ಎಸ್., ದಿನೇಶ್ ಗೂಳಿಗೌಡ , ಅರುಣ್, ಮಂಜುನಾಥ್ ಭಂಡಾರಿ, ಕುಶಾಲಪ್ಪ ಎಂ.ಪಿ,ಗೋಪಿನಾಥ್ ರೆಡ್ಡಿ, ತಿಮ್ಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನ ಪರಿಷತ್‍ಗೆ ಪುನರಾಯ್ಕೆಯಾಗಿರುವ ಎಸ್ ರವಿ, ಬಿ.ಜಿ.ಪಾಟೀಲ್ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಸದಸ್ಯ ಶರಣಗೌಡ ಭಗವಂತ ಹಾಗೂ ತಂದೆ ತಾಯಿಯ ಹೆಸರಿನಲ್ಲಿ, ರಾಘವೇಂದ್ರ ರಾಜಣ್ಣ ರೈತರ ಹೆಸರಿನಲ್ಲಿ, ಮೈಸೂರಿನ ನಂಜೇಗೌಡ ಮಂಜೇಗೌಡರು ಚಾಮುಂಡೇಶ್ವರಿ ದೇವಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರಿಸಿದರು. ಲಖನ್ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರದ ವೇಳೆ ಜೈಕಾರಗಳು ಮೊಳಗಿದವು.
# ಸ್ವಾರಸ್ಯಕರ ಘಟನೆಗಳು:
ಬೆಳಗಾವಿ ಕ್ಷೇತ್ರದಿಂದ ಪಕ್ಷೇತರವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ನೂನತ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆನ್ನು ತಟ್ಟಿ, ಅಭಿನಂದಿಸಿದ್ಧಾರೆ. ಬಳಿಕ ಲಖನ್ ಸಿದ್ದರಾಮಯ್ಯ ಅವರ ಜೊತೆ ನಿಂತು ಫೋಟೋ ತೆಗೆಸಿಕೊಂಡರು. ಪ್ರಮಾಣ ವಚನ ಸ್ವೀಕಾರಕ್ಕೆ ಲಖನ್ ಹೆಸರು ಹೇಳುತ್ತಿದ್ದಂತೆ ಬೆಂಬಲಿಗರು ಜೈಕಾರ ಕೂಗಿ ಘೋಷಣೆಗಳನ್ನು ಮೊಳಗಿಸಿದರು. ಈ ಮೂಲಕ ಲಖನ್ ಜಾರಕಿಹೊಳಿ ಪರ ಶಕ್ತಿ ಪ್ರದರ್ಶನವಾಯಿತು.
ಕಾರ್ಯಕ್ರಮಕ್ಕೆ ಬಂದ ಆಗಮಿಸಿದ ಲಖನ್ ಅವರು ಡಿ.ಕೆ.ಶಿವಕುಮಾರ್ ಅವರ ಸಾಲಿನಲ್ಲೆ ಕೂಳಿತರು. ಆದರೆ ಅಪ್ಪಿತಪ್ಪಿಯೂ ಡಿ.ಕೆ.ಶಿವಕುಮಾರ್ ಅವರನ್ನು ಮಾತನಾಡಿಸಲಿಲ್ಲ. ಹಾಗೇಯೇ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಸಹೋದರ ಹಾಗೂ ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಮಾತನಾಡಿಸಲಿಲ್ಲ. ಲಖನ್ ಬಂದಾಗ ಡಿ.ಕೆ.ಶಿವಕುಮಾರ್ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಾಸಕಿ ಲಕ್ಷ್ಮೀ ಹೆಬಾಳ್ಕರ್ ಮತ್ತು ವಿಧಾನ ಪರಿಷತ್‍ಗೆ ನೂತನವಾಗಿ ಆಯ್ಕೆಯಾಗಿರುವ ಹೆಬಾಳ್ಕರ್ ಅವರ ಸಹೋದರ ಚೆನ್ನರಾಜ ಹಟ್ಟಿಹೊಳಿ ಅವರ ಬಳಿ ಹತ್ತಿರ ಮಾತನಾಡಿಸಿ, ಅಭಿನಂದಿಸಿದರು.
ಕೆಳಗಿನಿಂದಲೇ ವೇದಿಕೆ ಮೇಲೆ ಕುಳಿತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಕರೆದು ಡಿ.ಕೆ.ಶಿವಕುಮಾರ್ ಮಾತನಾಡಿಸಿದರು. ಡಿ.ಕೆ.ಶಿವಕುಮಾರ್ ಮಾತನಾಡಿಸಿದ ಕೂಡಲೇ ಮುಖ್ಯಮಂತ್ರಿಯವರು ವೇದಿಕೆ ಮೇಲೆಯೇ ನಿಂತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನಜಂಗುಳಿ ತುಂಬಿ ತುಳುಕುತ್ತಿತ್ತು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು. ಲಖನ್ ಜಾರಕಿಹೊಳಿ ಬೆಂಬಲಿಗರ ಆರ್ಭಟ ಹೆಚ್ಚಾಗಿತ್ತು. ವಿಧಾನ ಪರಿಷತ್‍ಗೆ ಹೆಚ್ಚಿನ ಸದಸ್ಯರು ಆಯ್ಕೆಯಾಗಿರುವುದರಿಂದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

Articles You Might Like

Share This Article