ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಹಾಗೂ ಮೇಲ್ಸೇತುವೆಗಳ ಮೇಲೆ ಸಂಚಾರ ನಿಷೇಧ

Spread the love

ಬೆಂಗಳೂರು, ಡಿ.29- ಎಂಜಿ ರಸ್ತೆ ಹಾಗೂ ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ನಡೆಯುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲು ಸಂಚಾರ ನಿಷೇಧ ಮಾಡಲಾಗಿದ್ದು, ಜತೆಗೆ ನಗರದಾದ್ಯಂತ ಇರುವ ಎಲ್ಲ ಮೇಲ್ಸೇತುವೆಗಳ ಮೇಲೂ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾಕ್ರ್ಸ್ ರಸ್ತೆ, ಚರ್ಚ್‍ಸ್ಟ್ರೀಟ್‍ಗಳಲ್ಲಿ ಜನರು ಗುಂಪು ಸೇರುವ ಸಾಧ್ಯತೆಗಳಿವೆ. ಹಾಗಾಗಿ ಅನಿಲ್‍ಕುಂಬ್ಳೆ ವೃತ್ತದಿಂದ ಮೆಯೋಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್‍ವರೆಗೆ ರಸ್ತೆಯ ಎರಡೂ ಕಡೆ ಕಾವೇರಿ ಎಂಪೋರಿಯಂನಿಂದ ಅಪೇರಾ ಜಂಕ್ಷನ್‍ವರೆಗೆ, ಬ್ರಿಗೇಡ್ ರಸ್ತೆ ಜಂಕ್ಷನ್‍ನಿಂದ ಮ್ಯೂಜಿಯಂ ರಸ್ತೆ ಜಂಕ್ಷನ್‍ವರೆಗೆ, ಎಂಜಿ ರಸ್ತೆ ಜಂಕ್ಷನ್‍ನಿಂದ ಹಳೆ ಪೋಸ್ಟ್ ಆಫೀಸ್ ಜಂಕ್ಷನ್‍ವರೆಗೆ, ರೆಸ್ಟ್‍ಹೌಸ್ ಪಾರ್ಕ್ ರಸ್ತೆಯ ಮ್ಯೂಜಿಯಂ ರಸ್ತೆ ಜಂಕ್ಷನ್‍ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‍ವರೆಗೆ ಮತ್ತು ಚರ್ಚ್‍ಸ್ಟ್ರೀಟ್ ರಸ್ತೆವರೆಗೆ, ರೆಸಿಡೆನ್ಸಿ ರಸ್ತೆಯ ಆಶೀರ್ವಾದಂ ಜಂಕ್ಷನ್‍ನಿಂದ ಮೇಯೋಹಾಲ್ ಜಂಕ್ಷನ್‍ವರೆಗೆ ತುರ್ತು ವಾಹನ ಹಾಗೂ ಕರ್ತವ್ಯನಿರತ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಮತ್ತು ಈ ಭಾಗದಲ್ಲಿ ವಾಹನಗಳ ಪಾರ್ಕಿಂಗ್ ಕೂಡ ನಿಷೇಧಿಸಲಾಗಿದೆ.

ನಿಷೇಧಿತ ಮಾರ್ಗಗಳಿಗೆ ಪರ್ಯಾಯವಾಗಿ ಸುಗಮ ಸಂಚಾರಕ್ಕೆ ಕೆಲವು ರಸ್ತೆಗಳನ್ನು ನಗರ ಪೊಲೀಸರು ಗುರುತಿಸಿದ್ದಾರೆ. ಗುರುತಿಸಿದ ಮಾರ್ಗಗಳಲ್ಲಿ ಡಿ.31ರ ರಾತ್ರಿ 10 ಗಂಟೆಯಿಂದ ಜನವರಿ 1ರವರೆಗೂ ಪರ್ಯಾಯ ರಸ್ತೆಗಳನ್ನು ಬಳಸಬಹುದಾಗಿದೆ.

ಕ್ವೀನ್ಸ್ ರಸ್ತೆಯಿಂದ ಹಲಸೂರು ಹಾಗೂ ಇನ್ನು ಮುಂದಕ್ಕೆ ಹೋಗುವ ವಾಹನಗಳ ಚಾಲಕರು ಅನಿಲ್‍ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ ಬಿಆರ್‍ವಿ ಜಂಕ್ಷನ್ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂಜಿ ರಸ್ತೆ ಸೇರಿ ಮುಂದೆ ಸಂಚರಿಸಬಹುದು.

ಟ್ರಿನಿಟಿ ವೃತ್ತದ ಕಡೆಯಿಂದ ಬರುವ ವಾಹನಗಳು ವೆಬ್‍ಜಂಕ್ಷನ್ ಬಳಿ ಬಲ ತಿರುವು ಪಡೆದು ಮಣಿಪಾಲ್ ಸೆಂಟರ್ ಬಳಿ ಎಡ ತಿರುವು ಪಡೆದು ಕಬ್ಬನ್ ರಸ್ತೆಯಲ್ಲಿ ಮುಂದೆ ಸಾಗಬಹುದು. ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗಳಿಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ ಡಿಕಂಕ್ಷನ್ ರಸ್ತೆ ಮಾರ್ಗವಾಗಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬಹುದು.

ಕ್ಯಾಷ್ ಫಾರ್ಮಸಿ ಹಾಗೂ ಹಳೆ ಪಿಎಸ್ ಜಂಕ್ಷನ್ ಕಡೆಯಿಂದ ಬರುವ ವಾಹನಗಳು ಆಶೀರ್ವಾದಂ ವೃತ್ತದ ಮೂಲಕ ಹಲಸೂರು ಮತ್ತು ಹೊಸೂರು ರಸ್ತೆ ಕಡೆ ಹೋಗುವ ವಾಹನಗಳನ್ನು ಆಶೀರ್ವಾದಂ ವೃತ್ತದ ಬಳಿ ನಿರ್ಬಂಧಿಸಿದ್ದು, ಸದರಿ ವಾಹನಗಳು ಮ್ಯೂಜಿಯಂ ರಸ್ತೆ, ಎಸ್‍ಬಿಐ ಜಂಕ್ಷನ್, ಸೆಂಟ್‍ಮಾರ್ಕ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ಬಿಆರ್‍ವಿ ಜಂಕ್ಷನ್, ಕಬ್ಬನ್ ರಸ್ತೆ ಮೂಲಕ ಮುಂದೆ ಸಾಗಬಹುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜತೆಗೆ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಕೊ ಲೇಔಟ್‍ನ ಜಯದೇವ, ಬೆಂಗಳೂರು ಡೈರಿ ಮೇಲ್ಸೇತುವೆಗಳು, ವಿಮಾನ ನಿಲ್ದಾಣದ ದೇವರ ಬೀಸನಹಳ್ಳಿ ಮೇಲ್ಸೇತುವೆ, ವೈಟ್‍ಫೀಲ್ಡ್‍ನ ಕಾಡುಗೋಡಿ, ಬೆಳತ್ತೂರು ಸರ್ಜಾಪುರ ಮೇಲ್ಸೇತುವೆಗಳು, ಎಚ್‍ಎಸ್‍ಆರ್ ಲೇಔಟ್‍ನ ಅಗರ, ಇಬ್ಬಲೂರು, ಬೆಳಂದೂರು, 14ನೆ ಮುಖ್ಯರಸ್ತೆ ಮೇಲ್ಸೇತುವೆಗಳು, ಹಲಸೂರಿನ ಇಂದಿರಾನಗರ 100 ಅಡಿ ರಸ್ತೆ, ದೊಮ್ಮಲೂರು ಮೇಲ್ಸೇತುವೆ,

ಕೆಆರ್ ಪುರಂನ ಎಂಎಂ ಟೆಂಪಲ್ ಕೇಬಲ್ ಬ್ರಿಡ್ಜ್, ಹೊರವರ್ತುಲ ಎಂಡಿ ಪುರ ಬ್ರಿಡ್ಜ್, ದೊಡ್ಡನೆಕ್ಕುಂದಿ ಬ್ರಿಡ್ಜ್, ಮೇಡಹಳ್ಳಿ ಬ್ರಿಡ್ಜ್, ಪುಲಕೇಶಿನಗರದ ಐಟಿಸಿ ಮೇಲ್ಸೇತುವೆ, ಲಿಂಗರಾಜಪುರ ಮೇಲ್ಸೇತುವೆ, ಬಾಣಸವಾಡಿ, ಅಶೋಕನಗರ, ವಿಲ್ಸನ್ ಗಾರ್ಡನ್, ಆಡುಗೋಡಿ, ಉಪ್ಪಾರಪೇಟೆ, ಚಿಕ್ಕಪೇಟೆ, ಬ್ಯಾಟರಾಯನಪುರ, ಕಾಮಾಕ್ಷಿಪಾಳ್ಯ, ವಿವಿ ಪುರಂ, ಬಸವನಗುಡಿ, ಜಯನಗರ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ, ಕೆಂಗೇರಿ, ಆರ್‍ಟಿ ನಗರ, ಹೆಬ್ಬಾಳ, ಚಿಕ್ಕಜಾಲ ಪೊಲೀಸ್ ಠಾಣೆಗಳಲ್ಲಿ ಬರುವ ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

Facebook Comments