ಲಾಕ್ ಡೌನ್ ನಡುವೆ ಸುತ್ತಾಡಲು ಹೋಗಿದ್ದ ನವದಂಪತಿ ನೀರುಪಾಲು..!

ಹಾಸನ, ಮೇ 8- ಜಿಲ್ಲೆಯ ಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದ ಸಮೀಪ ನವ ದಂಪತಿ ಆಕಸ್ಮಿಕವಾಗಿ ಹೇಮಾವತಿ ನದಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಮೃತ ದುರ್ದೈವಿಗಳು.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಆರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ತನ್ನ ಸ್ವಗ್ರಾಮ ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮಕ್ಕೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಂದಿದ್ದರು ಎನ್ನಲಾಗಿದೆ.

ಬುಧವಾರ ಹೆನ್ನಲಿ ಗ್ರಾಮದಲ್ಲಿರುವ ತನ್ನ ಹೆಂಡತಿ ಮನೆಗೆ ತೆರಳಿದ್ದು, ಸಮೀಪವೇ ತಿರುಗಾಡಲೆಂದು ಬೈಕ್ ಸಮೇತ ಇಬ್ಬರೂ ಹೊರ ಹೋಗಿದ್ದಾರೆ. ಆದರೆ ಸಂಜೆ ಮನೆಯವರು ಮನೆಗೆ ಬಾರದಿರುವುದನ್ನು ಕಂಡು ಫೋನ್ ಮಾಡಿದ ವೇಳೆ ಇಬ್ಬರ ಫೋನ್‍ಗಳು ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕ ಶುರುವಾಗಿತ್ತು.

ನಿನ್ನೆ ಸಂಜೆ ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್ ಕಾಣಿಸಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿಗೆ ದೌಡಾಯಿಸಿದ ಮನೆಯವರು ಹಾಗೂ ಪೊಲೀಸರು ಮೀನುಗಾರರ ಸಹಾಯದಿಂದ ನದಿಯಲ್ಲಿ ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಕೃತಿಕಾ ಶವ ದೊರೆತಿದೆ.

ಇನ್ನು ಕತ್ತಲಾಗಿದ್ದರಿಂದ ಅರ್ಥೇಶ್ ಕುರಿತು ಮಾಹಿತಿ ತಿಳಿದು ಬಂದಿರಲಿಲ್ಲ. ಇಂದು ಮುಂಜಾನೆ ಶೋಧ ಕಾರ್ಯಾಚರಣೆ ನಡೆಸಲಾಗಿ ಅರ್ಥೇಶ್ ಶವವನ್ನು ಹೊರತೆಗೆಯಲಾಗಿದೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೇಲ್ನೋಟಕ್ಕೆ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.

Sri Raghav

Admin