ಬೆಂಗಳೂರು, ಫೆ.15- ನೈಸ್ ಸಂಸ್ಥೆ ಕಾಮಗಾರಿಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ವರದಿಯ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ವಿಧಾನ ಪರಿಷತ್ನಲ್ಲಿ ಸದಸ್ಯ ಹೆಚ್.ಎಸ್.ಗೋಪಿನಾಥ್ ಪ್ರಶ್ನೋತ್ತರದ ಅವಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2020ರ ಫೆಬ್ರವರಿ 18ರಂದು ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. 2021ರ ಅಕ್ಟೋಬರ್ 5ರಂದು ಉಪಸಮಿತಿಯನ್ನು ಪುನರ್ ರಚಿಸಲಾಗಿದೆ. ಸಮಿತಿ ಈವರೆಗೂ ನಾಲ್ಕು ಸಭೆಗಳನ್ನು ನಡೆಸಲಾಗಿದೆ. ಶೀಘ್ರವೇ ಸರ್ಕಾರಕ್ಕೆ ಅಂತಿಮ ಶಿಫಾರಸ್ಸುಗಳನ್ನು ಸಲ್ಲಿಸಲಿದೆ ಎಂದು ಹೇಳಿದರು.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಷರ್ ಕಾರಿಡಾರ್ ಯೋಜನೆಯ ಅನುಷ್ಠಾನದ ಉದ್ದೇಶದಿಂದ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಲಲ್ಲಿ ಒಟ್ಟು 29,267 ಎಕರೆ 23 ಗುಂಟೆ ಜಮೀನಿಗೆ ಕೆಐಎಡಿಬಿ ಕಾಯ್ದೆ ಕಲಂ 3(1) ರಂತೆ ಖಾಸಗಿ ಮತ್ತು ಸರ್ಕಾರಿ ಜಮೀನುಗಳಿಗೆ ಅಸೂಚನೆ ಹೊರಡಿಸಲಾಗಿದೆ. ಅದರಲ್ಲಿ 18,218 ಎಕರೆ 8.50 ಗುಂಟೆ ಖಾಸಗಿ ಜಮೀನುಗಳಿಗೆ ಪ್ರಾಥಮಿಕ ಅಸೂಚನೆ ಹೊರಡಿಸಲಾಗಿದೆ.
4810 ಎಕರೆ 4.52 ಗುಂಟೆ ಜಮೀನಿಗಳುಗೆ ಅಂತಿಮ ಅಸೂಚನೆ ಹೊರಡಿಸಲಾಗಿದೆ. 5 ಸಾವಿರ ಎಕರೆ 28 ಗುಮಟೆ ಸರ್ಕಾರಿ ಜಮೀನನ್ನು ನೈಸ್ ಕಂಪೆನಿಗೆ ಹಸ್ತಾಂತರಿಸಲಾಗಿದೆ.ಇಲ್ಲಿಯವರೆಗೂ ನೈಸ್ ಕಂಪೆನಿಗೆ ಒಟ್ಟು 1696 ಎಕರೆ, 33.65 ಗುಂಟೆ ಖಾಸಗಿ ಜಮೀನನ್ನು ಹಾಗೂ 2 ಎಕರೆ 17 ಗುಂಟೆ ಸರ್ಕಾರಿ ಜಮೀನನ್ನು ಕ್ರಯ ಪತ್ರ ಮಾಡಿಕೊಡಲಾಗಿದೆ. ಇನ್ನೂ 250 ಎಕರೆ ಭೂಮಿ ನೀಡುವುದು ಬಾಕಿ ಇದೆ ಎಂದು ವಿವರಿಸಿ, ನೈಸ್ ಯೋಜನೆಗೆ ಕಾಲಮಿತಿ ಜಾರಿಗೆ ಸಂಬಂಧ ಉಪಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಸದಸ್ಯ ಮರಿತಿಬ್ಬೇಗೌಡ, ಮೈಸೂರಿನಿಂದ ಬನ್ನೂರು ಮಾರ್ಗವಾಗಿ ಮಳವಳ್ಳಿವರೆಗಿನ ರಸ್ತೆಯು ಕೊರಟಗೆರೆ-ಬಾವಲಿ ರಾಜ್ಯ ಹೆದ್ದಾರಿ-33 ರಸ್ತೆಯಾಗಿದ್ದು, ತೀವ್ರವಾಗಿ ಹಾಳಾಗಿದೆ. ಎಷ್ಟು ದಿನಗಳಲ್ಲಿ ರಸ್ತೆ ದುರಸ್ಥಿ ಮಾಡಲಾಗುವುದು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಸಿ.ಸಿ.ಪಾಟೀಲ್, ಅತಿಯಾದ ಮಳೆಯಿಂದ ರಸ್ತೆ ಸಂಪರ್ಕ ಹಾಳಾಗಿದೆ. ಸರ್ಕಾರ ರಸ್ತೆ ದುರಸ್ಥಿಗೆ ಹಣ ಬಿಡುಗಡೆ ಮಾಡಿದ್ದೇವೆ. ರಸ್ತೆಯ ಗಂಭೀರತೆಯನ್ನು ಪರಿಶೀಲಿಸಿ ರಸ್ತೆ ದುರಸ್ಥಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸದಸ್ಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಮಳೆಯಿಂದ ಹಾಳಾದ ರಸ್ತೆಗಳ ದುರಸ್ಥಿತಿ 2020-21ರಲ್ಲಿ ಆರು ಸಾವಿರ, 2021-22ರ ಅವಯಲ್ಲಿ 6,100 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಮಲೆನಾಡು ಭಾಗದ ರಸ್ತೆಗಳನ್ನು ಶೀಘ್ರವೇ ದುರಸ್ತಿ ಮಾಡಲಾಗುವುದು ಎಂದು ಹೇಳಿದರು.
#CCPatil, #AssemblySession,