ತಮಿಳುನಾಡು, ಪುದುಚೇರಿಯಲ್ಲಿ ಎನ್‍ಐಎ ಕಾರ್ಯಾಚರಣೆ

Spread the love

ಚೆನ್ನೈ,ಜೂ.9- ರಾಷ್ಟ್ರೀಯ ತನಿಖಾ ದಳ ಎನ್‍ಐಎ ಇಂದು ತಮಿಳುನಾಡು ಹಾಗೂ ಪುದುಚೇರಿಯ ಕೆಲವು ಭಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಉಗ್ರ ಜಾಲಗಳ ಬೆನ್ನತ್ತಿದೆ.  ತಮಿಳುನಾಡಿನ ಚೆನ್ನೈ ನೆರೆಯ ಪುದುಚೇರಿ ಕರೆಕಲ್ಲ್ ಮತ್ತು ಮೈಲ್ನಾಡು ತುರೈ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಎನ್‍ಐಎನ ಭಯೋತ್ಪಾದನಾ ಘಟಕದ ಅಧಿಕಾರಿಗಳು ದಿಡೀರ್ ಕಾರ್ಯಾಚರಣೆ ನಡೆಸಿದ್ದು, ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇತ್ತೀಚೆಗೆ ಜಮ್ಮು ಕಾಶ್ಮೀರದ ಪೊಲೀಸರು ಬೆಂಗಳೂರಿನಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದ ಶಂಕಿತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಕರ್ನಾಟಕದ ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸ್ಯಾಟ್‍ಲೈಟ್ ಬಳಕೆಯ ಸಿಗ್ನಲ್‍ಗಳು ಪತ್ತೆಯಾಗಿದ್ದವು. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.

ಕಳೆದೆರಡು ವರ್ಷಗಳ ಹಿಂದೆ ಸರಣಿ ಕಾರ್ಯಾಚರಣೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ ಮತ್ತು ಕರ್ನಾಟಕದಲ್ಲಿ ಅಡಗಿದ್ದ ಕೆಲವು ಉಗ್ರರನ್ನು ಎಡೆಮುರಿ ಕಟ್ಟಿತ್ತು. ಹೀಗಾಗಿ ಒಂದಷ್ಟು ದಿನ ಉಗ್ರ ಚಟುವಟಿಕೆಗಳು ಹತೋಟಿಯಲ್ಲಿದ್ದವು. ಆದರೆ ಈಗ ಮತ್ತೆ ಅಲ್ಲಲ್ಲಿ ತಲೆ ಎತ್ತುತ್ತಿರುವುದರಿಂದ ಎನ್‍ಐಎ ಅಖಾಡಕ್ಕಿಳಿದಿದೆ.

Facebook Comments