ನವದೆಹಲಿ,ಸೆ.27- ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಕುಮ್ಮಕು ನೀಡಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 8ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್‍ಐಎ ತನಿಖಾ ತಂಡ ಮತ್ತೆ ಪಿಎಫ್‍ಐ ಮುಖಂಡರ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಿದೆ.
ಕರ್ನಾಟಕದಲ್ಲೇ ಅತಿದೊಡ್ಡ ದಾಳಿ ನಡೆದಿದ್ದು, ಸರಿಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 60ಕ್ಕೂ ಹೆಚ್ಚು ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಅಸ್ಸಾಂ, ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆ ಎನ್‍ಐಎ , ಇಡಿ, ಸ್ಥಳೀಯ ಪೊಲೀಸರು ಮಿಂಚಿನ ದಾಳಿ ನಡೆಸಿ 200ಕ್ಕೂ ಹೆಚ್ಚು ಪಿಎಫ್‍ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಬಿಜೆಪಿ ಮುಖಂಡರು ಹಾಗೂ ಆರ್‍ಎಸ್‍ಎಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಸದ್ಯದಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಕೇಂದ್ರ ಗುಪ್ತಚರ ವಿಭಾಗದ ಖಚಿತ ಮಾಹಿತಿ ಮೇರೆಗೆ ಎನ್‍ಐಎ, ಇಡಿ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನಿಂದ ದಾಳಿ ನಡೆಸಿದ್ದಾರೆ.
ಕಳೆದವಾರ ಎನ್‍ಐಎ ಅಧಿಕಾರಿಗಳು ದೇಶದ 13 ರಾಜ್ಯಗಳಲ್ಲಿ ಪಿಎಫ್‍ಐನ ಮುಖಂಡರನ್ನು ಬಂಧಿಸಿದ್ದಕ್ಕೆ ಪ್ರತೀಕಾರವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಗುಜರಾತ್‍ನಲ್ಲಿ ಎಸ್‍ಡಿಪಿಐನ ಸಕ್ರಿಯ ಕಾರ್ಯಕರ್ತ ಅಬ್ದುಲ್ ಖಾದೀರ್ ಸಯ್ಯದ್ ಎಂಬಾತನನ್ನು ಬಂಧಿಸಲಾಗಿದೆ. ಇತ್ತೀಚೆಗೆ ಕೇರಳದಲ್ಲಿ ಈತ ಸಂಘಪರಿವಾರದ ನಾಯಕರನ್ನು ಒಂದೇ ನಿಮಿಷದಲ್ಲಿ ಉಡೀಸ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಮಹಾರಾಷ್ಟ್ರದಲ್ಲೂ ದಾಳಿ ನಡೆಸಿರುವ ಎನ್‍ಐಎ ಅಧಿಕಾರಿಗಳು ಪಿಎಫ್‍ಐ ಮುಖಂಡರಾದ ಮೌಲಾನ ಇರ್ಫಾದ್ ನಾದ್ವಿ ಹಾಗೂ ಇಕ್ಬಾಲ್ ಎಂಬುವರನ್ನು ಸಹ ಬಂಧಿಸಲಾಗಿದೆ.
ನಾಸಿಕ್ ಜಿಲ್ಲೆಯಲ್ಲಿ ಪಿಎಫ್‍ಐನ ಮುಖಂಡ ಸಾಯೀದ್ ಉರ್ರ್ ರೆಹಮಾನ್‍ನನ್ನು ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಈ ಇಬ್ಬರು ಬೆದರಿಕೆ ಹಾಕಿದ್ದರು. ಇದೇ ರೀತಿ ಮಹಾರಾಷ್ಟ್ರದ ಬೇರೆ ಬೇರೆ ಕಡೆ ದಾಳಿ ನಡೆಸಿರುವ ಎನ್‍ಐಎ ಅಧಿಕಾರಿಗಳು 40 ಮುಖಂಡರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಪಿಎಫ್‍ಐ ಹಾಗೂ ಎಸ್‍ಡಿಪಿಐ ಮುಖಂಡರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ 30 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೆಹಲಿಯ ನಿಜಾಮುದ್ದೀನ್, ಶಾಹಿನ್ ಭಾಗ್ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿ ಹಲವರನ್ನು ವಶಕ್ಕೆಪಡೆಯಲಾಗಿದೆ. ಅತ್ತ ಮಧ್ಯಪ್ರದೇಶದಲ್ಲೂ ಕೂಡ ದಾಳಿ ನಡೆದಿದ್ದು, 21 ಜನರನ್ನು ವಶಕ್ಕೆ ಪಡೆದಿದ್ದರೆ ಉತ್ತರಪ್ರದೇಶದ ಲಖ್ನೋ, ಘಜಿಯಾಬಾದ್ ಮತ್ತಿತರ ಕಡೆ ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು 15 ಮಂದಿ ಪಿಎಫ್‍ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಲಖ್ನೋ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲೂ ದಾಳಿ ನಡೆಸಲಾಗಿದೆ. ಉಗ್ರರ ಉಪಟಳವಿರುವ ಅಸ್ಸಾಂನಲ್ಲೂ ಕೂಡ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ದರಾಂಗ್ ಜಿಲ್ಲೆಯ ಅನೀಶ್ ಅಹಮ್ಮದ್, ಖುರ್ಶಿದ್ ಅಲಂ, ಶಾಹೀದ್ ಇಸ್ಲಾಂ, ರಾಹುಲ್ ಅಮೀನ್, ಸಾದಗರಾಲಿ, ಸಲೀಮ ಜಶ್ಮಿತಾ, ರಫೀಕ್ ಇಸ್ಲಾಂ, ಅಶೀಕ್ ಇಕ್ಬಲ್ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ದುಷ್ಕøತ್ಯಕ್ಕೆ ಹೊಂಚು:
ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರು ಇತ್ತೀಚೆಗೆ ನಿಷೇಧಿತ ಐಸಿಸ್ ಹಾಗೂ ಪಾಕ್ ಮೂಲದ ಉಗ್ರಗಾಮಿ ಸಂಘಟನೆಗಳ ಮುಖಂಡರ ಜೊತೆ ಕೈ ಜೋಡಿಸಿ ದೇಶದ ವಿವಿಧ ಕಡೆ ರಕ್ತಪಾತ ನಡೆಸಲು ಸಂಚು ರೂಪಿಸಿರುವುದನ್ನು ಗುಪ್ತಚರ ವಿಭಾಗ ಪತ್ತೆಹಚ್ಚಿತ್ತು.
ಆ ಸಂಘಟನೆಗಳ ಮುಖಂಡರನ್ನು ಬಂಧಿಸಿ ಬ್ಯಾಂಕ್ ಖಾತೆಗಳನ್ನು ತಟಸ್ಥಗೊಳಿಸಿದ ನಂತರ ಹಣಕಾಸಿನ ವಹಿವಾಟು ನಿಂತುಹೋಗಿತ್ತು. ವಿದೇಶಗಳಿಂದ ಬರುತ್ತಿದ್ದ ಆದಾಯದ ಮೂಲಕ್ಕೆ ಹೊಡೆತ ಬಿದ್ದ ಪರಿಣಾಮ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು.
ಇದರ ಮೊದಲ ಭಾಗವಾಗಿ ಇತ್ತೀಚೆಗೆ ಕೇರಳದಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದರು. ಸದ್ಯದಲ್ಲೇ ದೇಶಾದ್ಯಂತ ಕೆಲವು ಪ್ರಮುಖ ನಾಯಕರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬುದು ಖಚಿತಪಡುತ್ತಿದ್ದಂತೆ ಎನ್‍ಐಎ, ಇಡಿ ಏಕಕಾಲದಲ್ಲಿ ಪಿಎಫ್‍ಐನ ಮುಖಂಡರಿಗೆ ಹೆಡೆಮುರಿ ಕಟ್ಟಿದೆ.
ಜಾಮೀನು ಇಲ್ಲ:
ಬಂಧಿತ ಪಿಎಫ್‍ಐ ಮುಖಂಡರಿಗೆ ಯಾವುದೇ ಆರೋಪ ಇಲ್ಲದವರು ಮಾತ್ರ ಬಾಂಡ್‍ಗಳಿಗೆ ಸಹಿ ಹಾಕಿದರೆ ಜಾಮೀನು ಕೊಡುತ್ತೇವೆ. ಸಣ್ಣದೊಂದು ಆರೋಪಗಳಿದ್ದರೂ ಜಾಮೀನು ನೀಡುವುದಿಲ್ಲ ಎಂದು ಎನ್‍ಐಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಯಾವುದೇ ವ್ಯಕ್ತಿಗಳಿಗೆ ಜಾಮೀನು ನೀಡುವಾಗ ಬಾಂಡ್‍ಗೆ ಸಹಿ ಹಾಕುವ ವ್ಯಕ್ತಿಯ ಪೂರ್ವಪರ ಹಿನ್ನೆಲೆಯನ್ನು ತಿಳಿದುಕೊಂಡು ಪರಿಶೀಲನೆ ನಡೆಸಬೇಕೆಂದು ಎನ್‍ಐಎ ಅಧಿಕಾರಿಗಳು ದೇಶದ ಎಲ್ಲ ಎಸ್ಪಿ ಮತ್ತು ತಹಸೀಲ್ದಾರ್ ಅವರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.