ನವದೆಹಲಿ,ಸೆ.18- ಪಿಎಫ್‍ಐನ ಚಟುವಟಿಕೆ ಆಧರಿಸಿ ರಾಷ್ಟ್ರೀಯ ತನಿಖಾ ದಳ ಇಂದು ಅಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರೆ, ಕಡಪ, ಗುಂಟೂರು, ತೆಲಂಗಾಣದ ನಿಜಾಮಬಾದ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ಹಲವು ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಪಿಎಫ್‍ಐ ಸಂಘಟನೆಯ ಅಬ್ದುಲ್ ಖಾದರ್ ಮತ್ತು ಇತರ 26ಕ್ಕೂ ಹೆಚ್ಚು ಮಂದಿ ವಿರುದ್ದ ಎನ್‍ಐಎನ ಹೈದರಾಬಾದ್ ಘಟಕ ಆ.28ರಂದು ಪ್ರಕರಣ ದಾಖಲಿಸಿತ್ತು. ಪಿಎಫ್‍ಐ ಸಂಘಟನೆ ಕೇಂದ್ರ ಸರ್ಕಾರದ ವಿರುದ್ಧ ಸಂಚು ರೂಪಿಸಿದೆ. ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗವಹಿಸಲು ಕೆಲವರಿಗೆ ತರಬೇತಿ ನೀಡಲಾಗುತ್ತಿದೆ.
ಅಕ್ರಮ ಕೂಟಗಳನ್ನು ರಚಿಸಿ ವಿವಿಧ ಧರ್ಮಗಳ ನಡುವೆ ದ್ವೇಷ ಬಿತ್ತಲಾಗುತ್ತಿದೆ. ದೇಶದ ಸಾರ್ವಭೌತ್ವ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಎಫ್‍ಐಆರ್‍ನಲ್ಲಿ ಎನ್‍ಐಎ ಆರೋಪಿಸಲಾಗಿದೆ.
ಯುಎಪಿಎ ಕಾಯ್ದೆ ಅನುಸಾರವೂ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಪಿಎಫ್‍ಐನ ಮುಖಂಡರನ್ನು ವಿಚಾರಣೆಗೊಳಪಡಿಸಲಾಗಿದ್ದು, ಮೊಹಮ್ಮದ್ ಅಬ್ದುಲ್ ಮೊದೀನ್ ಮತ್ತು ಸಾಧತುಲ್ಲಾ, ಮೊಹಮ್ಮದ್ ಇಮ್ರಾನ್ ಅವರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ವೇಳೆ ಪಿಆರ್‍ಪಿಎಫ್ ಯೋಧರು ಶಸ್ತ್ರ ಸಜ್ಜಿತರಾಗಿ ಭದ್ರತೆ ಒದಗಿಸಿದ್ದಾರೆ.