ನೈಟ್ ಕರ್ಫ್ಯೂ-ವೀಕೆಂಡ್ ಕರ್ಫ್ಯೂಗೆ ಉದ್ಯಮಿಗಳಿಂದ ಭಾರೀ ವಿರೋಧ

Social Share

ಬೆಂಗಳೂರು, ಜ.18- ಸರ್ಕಾರದ ನೈಟ್‍ ಕರ್ಫ್ಯೂ ಮತ್ತು ವೀಕೆಂಡ್ಗೆಕರ್ಫ್ಯೂಗೆ  ಭಾರೀ ವಿರೋಧ ವ್ಯಕ್ತವಾಗಿದೆ. ಹೊಟೇಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಹಾಗೂ ಮದುವೆ ಮಂಟಪಗಳ ಮಾಲೀಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅನುವು ಮಾಡಿಕೊಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವೀಕೆಂಡ್ ಕರ್ಫ್ಯೂ  ಅವಧಿಯನ್ನು ಜ.31ರ ವರೆಗೆ ವಿಸ್ತರಿಸಲು ತೀರ್ಮಾನಿಸಿರುವ ಬೆನ್ನಲ್ಲೇ ರಾಜ್ಯ ಹೊಟೇಲ್ ಮಾಲೀಕರ ಸಂಘ, ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘ, ಕರವೇ ಹೊಟೇಲ್ ಉದ್ದಿಮೆದಾರರ ಸಂಘ, ಕರ್ನಾಟಕ ಪ್ರದೇಶ ಹೊಟೇಲ್ ಮಾಲೀಕರ ಸಂಘ, ಬೆಂಗಳೂರು ಬಂಡ್ಸ್ ಹೊಟೇಲ್ ಮಾಲೀಕರ ಸಂಘ, ಕರ್ನಾಟಕ ಕ್ಯಾಟರಿಂಗ್ ಅಸೋಸಿಯೇಷನ್, ದರ್ಶಿನಿ ಹೊಟೇಲ್ ಮತ್ತು ಬೇಕರಿ ಮಾಲೀಕರ ಸಂಘ ಹಾಗೂ ಮದುವೆ ಮಂಟಪಗಳ ಮಾಲೀಕರ ಸಂಘದವರು ಸದ್ಯ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ವೀಕೆಂಡ್ ಮತ್ತು ನೈಟ್‍ ಕರ್ಫ್ಯೂನಿಂದಾಗಿ ಹೊಟೇಲ್ ಹಾಗೂ ಕಲ್ಯಾಣ ಮಂಟಪಗಳ ಉದ್ಯಮ ನೆಲ ಕಚ್ಚಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾವು ಬೀದಿಗೆ ಬರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಈಗಾಗಲೇ ಮದುವೆ ಸೀಜನ್ ಶುರುವಾಗಿದೆ. ಆದರೂ ಮಂಟಪ ಬುಕ್ ಮಾಡಲು ಜನ ಮುಂದೆ ಬರುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ನಾವು ನಷ್ಟದಲ್ಲಿದ್ದೇವೆ. ಹೀಗಾಗಿ ನಮ್ಮ ಸಂಕಷ್ಟ ಬಗೆಹರಿಸಲು ಸರ್ಕಾರ ಸಹಕಾರ ನೀಡಬೇಕು ಎಂದು ಅವರು ಅಲವತ್ತುಕೊಂಡಿದ್ದಾರೆ.
ಕೊರೊನಾದಿಂದಾಗಿ ಜನ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಸರಳ ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹಲವಾರು ಕಲ್ಯಾಣ ಮಂಟಪಗಳು ಮುಚ್ಚಿಹೋಗಿದ್ದು, ನಿರ್ಬಂಧ ಇದೇ ರೀತಿ ಮುಂದುವರಿದರೆ ನಾವು ಛತ್ರಗಳಿಗೆ ಬೀಗ ಜಡಿಯಬೇಕಾಗುತ್ತದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Articles You Might Like

Share This Article