ಬೆಂಗಳೂರು, ಮೇ 25- ರಾಜ್ಯ ವಿಧಾನಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ.ಪಕ್ಷ ಪುನರ್ ಸಂಘಟನೆ ಮಾಡಲು ಮತ್ತು ಹೊಸ ನಾಯಕತ್ವಕ್ಕೆ ಅವಕಾಶ ಮಾಡಿ ಕೊಡುವ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿಯವರು ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಫಲಿತಾಂಶವು ಬೇಸರ ಉಂಟು ಮಾಡಿರುವುದರ ಜೊತೆಗೆ ಪಕ್ಷವನ್ನು ಹೊಸದಾಗಿ ಮರು ನಿರ್ಮಾಣ ಮಾಡುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಬಸ್‍ಗಳಲ್ಲಿ ಟಿಕೆಟ್ ತೆಗದುಕೊಳ್ಳದ ಮಹಿಳೆಯರು, ಸಾರಿಗೆ ನಿಗಮಕ್ಕೆ ತಲೆನೋವು
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಅವರ ಮಾರ್ಗದರ್ಶನದಲ್ಲಿ ಕೈಲಾದ ಮಟ್ಟಿಗೆ ಕರ್ತವ್ಯ ನಿರ್ವಹಿಸಿ ಪಕ್ಷ ಸಂಘಟನೆ ಮಾಡಲು ಶ್ರಮಿಸಿರುವುದಾಗಿ ಹೇಳಿದ್ದಾರೆ.
ಚುನಾವಣೆಯ ಸೋಲೇ ಅಂತಿಮವಲ್ಲ. ಈ ಸೋಲನ್ನು ಮೆಟ್ಟಿ ಪಕ್ಷವನ್ನು ಬಲವಾಗಿ ಕಟ್ಟುವ ದಿಸೆಯಲ್ಲಿ ಎಲ್ಲರೂ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ. ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕಿದೆ.ಈ ನಿಟ್ಟಿನಲ್ಲಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಅವರು ಕೋರಿದ್ದಾರೆ.
ನವ ನಾಯಕತ್ವಕ್ಕೆ ಅನುವು ಮಾಡಿಕೊಟ್ಟು ಪಕ್ಷವನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಸಾಗಬೇಕೆಂದು ಮನವಿ ಮಾಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಸಂಘಟನೆ ಕೆಲಸಕ್ಕೆ ಸದಾ ಸಿದ್ಧವಿದ್ದು, ಯುವ ಸಮುದಾಯದ ಜೊತೆ ಸೇರಿ ಪಕ್ಷ ಕಟ್ಟುವುದಕ್ಕೆ ಹಿಂಜರಿಯುವುದಿಲ್ಲ. ಇಷ್ಟು ದಿನ ನನ್ನೊಂದಿಗೆ ಶ್ರಮಿಸಿ ಪಕ್ಷಕ್ಕಾಗಿ ಹೆಗಲು ಕೊಟ್ಟ ಎಲ್ಲಾ ಹಿರಿ-ಕಿರಿಯರಿಗೆ ನಮನಗಳನ್ನು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
#NikhilKumaraswamy, #resigns, #statepresident, #JDSYouthUnit,