ಉಕ್ರೇನ್‍ನಿಂದ ಸ್ವದೇಶಕ್ಕೆ ಮರಳಿದ ಕರ್ನಾಟಕದ 9 ವಿದ್ಯಾರ್ಥಿಗಳು

Social Share

ಬೆಂಗಳೂರು,ಮಾ.2-ಯುದ್ದಪೀಡಿತ ಉಕ್ರೇನ್‍ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಇಂದು 9 ಮಂದಿ ಕನ್ನಡಿಗರು ಸ್ವದೇಶಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ನವದೆಹಲಿಗೆ ಆಗಮಿಸಿರುವ 9 ಮಂದಿ ಕನ್ನಡಿಗರು ಸಂಜೆ ವೇಳೆಗೆ ರಾಜ್ಯಕ್ಕೆ ಮರಳಿದ್ದಾರೆ.
ಫೆ.27ರಿಂದ ಇಲ್ಲಿಯವರೆಗೆ 64 ಮಂದಿ ಸುರಕ್ಷಿತವಾಗಿ ಮರಳಿದಂತಾಗಿದೆ. ಉಕ್ರೇನ್‍ನಿಂದ ದೆಹಲಿ ಹಾಗೂ ಮುಂಬೈ ಮೂಲಕ ರಾಜ್ಯಕ್ಕೆ ಬರಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ(ಕೆಎಸ್‍ಡಿಎಂಎ)ದ ಆಯುಕ್ತ ಹಾಗೂ ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.
ನಿನ್ನೆ ರಾತ್ರಿಯವರೆಗೆ ಒಟ್ಟು 18 ಮಂದಿ ರಾಜ್ಯಕ್ಕೆ ಮರಳಿದ್ದಾರೆ. ಉಕ್ರೇನ್‍ನಲ್ಲಿ ಸಿಲುಕಿರುವ 693 ಕನ್ನಡಿಗರ ಮಾಹಿತಿಯನ್ನು ಒದಗಿಸಿದ್ದು, ಕೇಂದ್ರ ಸರ್ಕಾರದ ನೆರವಿನೊಂದಿಗೆ ಸುರಕ್ಷಿತವಾಗಿ ಅವರನ್ನು ಕರೆತರುವ ಪ್ರಯತ್ನ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಯುದ್ಧಪೀಡಿತ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಹಾಗೂ ಅಗತ್ಯ ಸೌಲಭ್ಯ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Articles You Might Like

Share This Article