“ಕೊರೋನಾ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದರಲ್ಲಿ ಯಾವುದೇ ಅರ್ಥವಿಲ್ಲ”

Social Share

ಬೆಂಗಳೂರು, ಜ.21- ಬಾರು, ಪಬ್, ಮದುವೆ ಕಲ್ಯಾಣ ಮಂಟಪಗಳನ್ನು ತೆರೆದಿಟ್ಟು, ಶಾಲೆಗಳನ್ನು ಮಾತ್ರ ಮುಚ್ಚುವುದು ಸರಿಯಾದ ಕ್ರಮವಲ್ಲ. ಕೂಡಲೇ ಶಾಲೆಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಒತ್ತಾಯಿಸಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ರೀತಿಯ ಸಮರ್ಥನೆ ಮಕ್ಕಳ ಹಿತಾಸಕ್ತಿಗೆ ಮಾರಕವಾಗಿದೆ.
ಎಷ್ಟೇ ಹೊಸ ಅಲೆಗಳು ಬಂದರೂ ಶಾಲೆಗಳನ್ನು ಮುಚ್ಚುವುದು ಕೊನೆಯ ಅಸ್ತ್ರವಾಗಬೇಕು ಹಾಗು ಶಾಲೆಗಳನ್ನು ತೆಗೆಯುವುದು ಮೊದಲ ಆದ್ಯತೆಯಾಗಬೇಕು. ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ತೆರೆದು ಶಾಲೆಗಳನ್ನು ಮುಚ್ಚುವುದರ ಹಿಂದೆ ಕೇವಲ ಭಯ ಇದೆಯೇ ವಿನಃ ವೈಜ್ಞಾನಿಕ ಕಾರಣಗಳಿಲ್ಲ ಎಂದಿದ್ದಾರೆ.
ಕೋವಿಡ್ ಮಕ್ಕಳನ್ನು ಹೆಚ್ಚು ಬಾಸಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ . ನವೆಂಬರ್‍ನಲ್ಲಿ ಶಾಲೆಗಳನ್ನು ತೆರೆದಿದ್ದರಿಂದ ವೈರಸ್ ಹರಡುತ್ತದೆಯೇ ಎಂದು ಅಧ್ಯಯನ ಮಾಡಲು ಸಾಧ್ಯವಾಗಿದೆ. ಮಕ್ಕಳಿಗೆ ಹೆಚ್ಚು ತೊಂದರೆ ಇಲ್ಲ ಎಂಬುದನ್ನು ದೇಶ ಅಥವಾ ವಿದೇಶಗಳ ದತ್ತಾಂಶಗಳು ತೋರಿಸಿದೆ. ಮಕ್ಕಳು ಸೋಂಕಿಗೆ ಒಳಗಾಗಬಹುದಾದರೂ, ಗಂಭೀರತೆ ಹಾಗು ಸಾವುಗಳು ತೀರಾ ಕಡಿಮೆ. ಸರಕಾರ ಈ ಬಗ್ಗೆ ಎಲ್ಲ ಮಾಹಿತಿಯನ್ನು ಬಿಡುಗಡೆ ಮಾಡಬೇಕು ಎಂದರು.
ಶಾಲೆಗಳನ್ನು ತೆರೆಯುವುದರಿಂದ ಮಕ್ಕಳಿಗಿರುವ ಲಾಭಗಳು ಹೆಚ್ಚು ಹಾಗು ಆರೋಗ್ಯದ ಅಪಾಯಗಳು ಕಡಿಮೆ .ಶಾಲೆ ಮುಚ್ಚುವುದರಿಂದ ನಾವು ತಕ್ಷಣ ಹಾಗು ದೀರ್ಘ ಕಾಲದಲ್ಲಿ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಕೋವಿಡ್ ಪ್ರಾರಂಭದಲ್ಲಿ ನಾವು ರೋಗದ ಗುಣ ಲಕ್ಷಣಗಳನ್ನು ತಿಳಿಯುವ ಬಗೆ, ತಡೆಗಟ್ಟುವ ಉತ್ತಮ ಮಾರ್ಗ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ಇತ್ಯಾದಿಗಳ ಬಗ್ಗೆ ನಮಗೆ ಹೆಚ್ಚು ವೈಜ್ಞಾನಿಕವಾಗಿ ತಿಳಿದಿರಲಿಲ್ಲ.
2021ರ ನಂತರ ಸಂಶೋಧನೆಗಳ ಫಲವಾಗಿ ಪರಿಸ್ಥಿತಿಯನ್ನು ಎದುರಿಸಲು ನಾವು ಹೆಚ್ಚು ಶಕ್ತರಿದ್ದೇವೆ. ಕೋವವಿಡ್‍ಗಿಂತಲೂ ಮೊದಲೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಸಮಾನತೆ, ತಾರತಮ್ಯ ಹಾಗು ಪ್ರತ್ಯೇಕತೆ ಪ್ರಚಲಿತದಲ್ಲಿದ್ದವು. ಕೋವಿಡ್ ಅದನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಶಾಲೆಗಳು ಮಕ್ಕಳಿಗೆ ಸುರಕ್ಷಿತ ಸ್ಥಳಗಳಾಗಿವೆ. ಜೊತೆಗೆ ಬಿಸಿಯೂಟ, ಆರೋಗ್ಯ ತಪಾಸಣೆ, ಶಿಕ್ಷಕರ ಗಮನ ಹಾಗು ಸಹಪಾಠಿಗಳ ಒಡನಾಟ ಮಕ್ಕಳಿಗೆ ಹೆಚ್ಚಿನ ರಕ್ಷಣೆ ಹಾಗು ಭರವಷೆಯನ್ನು ಒದಗಿಸುತ್ತದೆ. ಬೆಂಗಳೂರು ನಗರದಲ್ಲಿ ಎಲ್ಲಾ ಮಕ್ಕಳಿಗು ಆನ್ ಲೈನ್ ಕಲಿಕಾ ಸೌಲಭ್ಯವಿಲ್ಲ. ಸರ್ಕಾರಿ, ಅನುದಾನಿತ ಮಹಾನಗರ ಪಾಲಿಕೆ, ಹಾಗು ಸಣ್ಣ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಅವಕಾಶಚಂಚಿತ ಸಮುದಾಯಗಳಿಗೆ ಸೇರಿದ್ದು, ತಂದೆ-ತಾಯಿ ಕೂಲಿ ಕೆಲಸಕ್ಕೆ ಹೋದಾಗ, ಮಕ್ಕಳಿಗೆ ಶಾಲೆ ಎರಡನೇ ಮನೆಯಾಗಿರುತ್ತದೆ.
ನಗರದಲ್ಲಿ , ಸುಮಾರು 198 ವಾರ್ಡಗಳಿದ್ದು, ಎಲ್ಲಾ ಕಡೆಯು ಕೋವಿಡ್ ಒಂದೇ ರೀತಿಯಲ್ಲಿಲ್ಲ. ಇದನ್ನು ಆಧರಿಸಿ, ವಾರ್ಡ್ ವಾರು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ ಕ್ರಮ.ಪ್ರಕರಣಗಳು ಇಲ್ಲದೆಡೆ ಶಾಲೆಗಳನ್ನು ತೆಗೆಯಲು ಕ್ರಮವಹಿಸುವುದು ಸೂಕ್ತ.
ಮದುವೆಗಳಿಗೆ ಒಳಾಂಗಣದಲ್ಲಿ 100 ಜನ,ಹೊರಾಂಗಣದಲ್ಲಿ 200 ಜನ ಹಾಗು ಹೋಟೆಲ್, ಬಾರ್, ಪಬ್ ,ಕ್ಲಬ್ ಇತ್ಯಾದಿಗಳಲ್ಲಿ ಶೇಕಡ 50 ಕ್ಕೆ ಅವಕಾಶ ನೀಡಿ ತೆರೆದಿರುವುದಾದರೆ, ಶಾಲೆಗಳನ್ನು ಮುಚ್ಚುವುದು ಅರ್ಥವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Articles You Might Like

Share This Article