ನವದೆಹಲಿ, ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ಭಾಷಣದಲ್ಲಿ ಎಲ್ಲರಿಗೂ ಸೂರು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗೆ ಸಚಿವರು ಆದ್ಯತೆ ನೀಡಿದ್ದಾರೆ.
ಬಜೆಟ್ ಭಾಷಣದಲ್ಲಿ ಸಚಿವರು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 48,000 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. 2022-23ರಲ್ಲಿ 80 ಲಕ್ಷ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 60,000 ಮನೆಗಳನ್ನು ಹಂಚಲು ಜನರನ್ನು ಗುರುತಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜÁರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
4ನೇ ಬಾರಿ ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್ 2015ರಲ್ಲಿ ಕೇಂದ್ರ ಸರ್ಕಾರ ಎಲ್ಲರಿಗೂ ವಸತಿ ಘೋಷಣೆಯಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಆರಂಭಿಸಿತು.
ಏರಿಕೆಯಾಗುತ್ತಿರುವ ರಿಯಲ್ ಎಸ್ಟೇಟ್ ದರಗಳ ನಡುವೆಯೂ ಎಲ್ಲರೂ ಮನೆ ಖರೀದಿ ಮಾಡುವಂತಾಗಲು ಭಾರತ ಸರ್ಕಾರ ಈ ಯೋಜನೆ ಆರಂಭಸಿತ್ತು. 2022ರ ಮಾರ್ಚ್ 31ರೊಳಗೆ ಎಲ್ಲರಿಗೂ ವಸತಿ ಒದಗಿಸುವುದು ಯೋಜನೆ ಉದ್ದೇಶ ವಾಗಿತ್ತು.
ದೇಶದಲ್ಲಿರುವ ಎಲ್ಲಾ ವಸತಿ ಹೀನರಿಗೆ ಮತ್ತು ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡ ಪಕ್ಕಾ ಮನೆಯನ್ನು ಒದಗಿಸಿಕೊಡಲು ಪ್ರಧಾನ ಮಂತ್ರಿ ಆವಾಸ್ ಯೋಜನಾ (ನಗರ/ ಗ್ರಾಮೀಣ) ಯೋಜನೆಯನ್ನು ರೂಪಿಸಿದೆ. ದೇಶದ ಎಲ್ಲ ನಗರ ಪ್ರದೇಶಗಳಲ್ಲಿ ಉದ್ದೆಶಿತ ಗುರಿ ಸಾಧನೆಗೆ ಈ ಯೋಜನೆ ನೆರವಾಗಲಿದೆ.
ಈ ಯೋಜನೆಯನ್ನು 2015ರ ಜೂ.25 ರಂದು ಆರಂಭಿಸಲಾಯಿತು. 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳ 4,041 ನಗರ ಮತ್ತು ಪಟ್ಟಣಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಮೊದಲು ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸೀಮಿತವಾಗಿತ್ತು.
ನರೇಂದ್ರ ಮೋದಿ 2016ರಡಿಸೆಂಬರ್ 31ರಂದು ಯೋಜನೆಯನ್ನು ಮಧ್ಯಮ ಆದಾಯದ ಗುಂಪುಗಳಿಗೂ ವಿಸ್ತರಿಸುವ ಘೋಷಣೆ ಮಾಡಿದರು. ಯೋಜನೆ ಅನ್ವಯ ವಾರ್ಷಿಕ ಆದಾಯ 3 ಲಕ್ಷ ರೂಪಾಯಿವರೆಗೆ ಇರುವವರನ್ನು ಆರ್ಥಿಕವಾಗಿ ಹಿಂದುಳಿದವರು ಹಾಗು ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ರೂ. ಗಳ ವರೆಗೆ ಇರುವವರನ್ನು ಕಡಿಮೆಆದಾಯದ ಗುಂಪು ಮತ್ತು ವಾರ್ಷಿಕ ಆದಾಯ 6 ಲಕ್ಷದಿಂದ 12 ಲಕ್ಷದವರೆಗೆ ಇರುವ ಕುಟುಂಬಗಳನ್ನು ಮಧ್ಯಮ ವರ್ಗ ಗುಂಪು 1, ಮತ್ತು ವಾರ್ಷಿಕ ಆದಾಯ 12 ಲಕ್ಷದಿಂದ 18 ಲಕ್ಷದವರೆಗೆ ಇರುವ ಕುಟುಂಬಗಳನ್ನು ಮಧ್ಯಮ ವರ್ಗ2 ಎಂದು ವಿಂಗಡಿಸಿ ಅವರನ್ನು ಫಲಾನುಭವಿಗಳಾಗಿ ಈ ಯೋಜನೆ ಗುರುತಿಸಲಾಗುತ್ತದೆ.
# ಬಜೆಟ್ ಭಾಷಣದ ಮುಖ್ಯಾಂಶಗಳು :
* ಲಸಿಕೆ ಹಾಕುವಲ್ಲಿನ ವೇಗವು ಆರ್ಥಿಕ ಚೇತರಿಕೆಗೆ ನೆರವಾಗಿದೆ.
* ದೇಶ ಈಗ ಓಮಿಕ್ರಾನ್ ಅಲೆಯ ನಡುವೆ ಇದೆ.
* 2021-22ರಲ್ಲಿ ಆರ್ಥಿಕತೆಯಲ್ಲಿ ಕ್ಷಿಪ್ರ ಹಿನ್ನಡೆ ಉಂಟಾಯಿತು. ಶೇ.9.2ರ ಬೆಳವಣಿಗೆ ನಿರೀಕ್ಷಿಸಲಾಗಿತ್ತು.
* ಸರ್ಕಾರವು 2014ರಿಂದ ಬಡ ಮತ್ತು ಅವಕಾಶವಂಚಿತ ಜನರಿಗೆ ಆದ್ಯತೆ ನೀಡಿದೆ. ಸರ್ಕಾರವು ಮಧ್ಯಮ ವರ್ಗಕ್ಕೆ ಅಗತ್ಯ ಪರಿಸರ ವ್ಯವಸ್ಥೆಯನ್ನು ಒದಗಿಸಲು ಶ್ರಮಿಸುತ್ತಿದೆ.
* ವಿದೇಶೀ ಬಂಡವಾಳ ಮತ್ತು ಖಾಸಗಿ ಬಂಡವಾಳ ಹೂಡಿಕೆಯಲ್ಲಿನ ಹೆಚ್ಚಳದಿಂದ ಹೂಡಿಕೆಯ ಪ್ರಮಾಣ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.
* ಏರ್ ಇಂಡಿಯಾದ ಮಾಲೀಕತ್ವದ ಕಾರ್ಯತಂತ್ರ ವರ್ಗಾವಣೆ ಪೂರ್ಣಗೊಂಡಿದೆ. ಎನ್‍ಐಎನ್‍ಎಲ್‍ನ ಕಾರ್ಯತಂತ್ರ ಖರೀದಿದಾರರನ್ನು ಆಯ್ಕೆ ಮಾಡಲಾಗಿದೆ.
* ಎನ್‍ಆರ್‍ಸಿಎಲ್ ತನ್ನ ಚಟುವಟಿಕೆಯನ್ನು ಆರಂಭಿಸಿದೆ.
* ಉತ್ಪಾದಕತೆ ಸಂಪರ್ಕಿತ ಯೋಜನೆಗಳು 14 ಕ್ಷೇತ್ರಗಳಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಸ್ವೀಕರಿಸುವ ಹೂಡಿಕೆ ಅಂದಾಜು 30 ಲಕ್ಷ ಕೊಟಿ ರೂ.ಗಳಷ್ಟು ಇದೆ.
