ರಾಜ್ಯಸಭಾ ಚುನಾವಣೆ : ನಿರ್ಮಲಾ ಸೀತಾರಾಮನ್‍ಗೆ ಕೋಕ್ ಸಾಧ್ಯತೆ..?

ಬೆಂಗಳೂರು,ಮೇ23- ನಿಗೂಢತೆ ಕಾಯ್ದುಕೊಳ್ಳುವಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿಯ ವರಿಷ್ಠರು ಜೂನ್ 10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಹೈಕಮಾಂಡ್ ತಮ್ಮ ಅಂತಿಮ ನಿರ್ಧಾರವನ್ನು ತಿಳಿಸಲು ಸಿಎಂ ಬೊಮ್ಮಾಯಿಯನ್ನು ದೆಹಲಿಗೆ ಕರೆಸಿಕೊಂಡರು ಎನ್ನುವ ಮಾತು ಕೇಳಿ ಬರುತ್ತಿದೆ.

ರಾಜ್ಯ ಬಿಜೆಪಿ ಕೋರ್ ಕಮಿಟಿಯವರು ಶಿಫಾರಸು ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿದ್ದರು. ಇದರೆ ಜೊತೆಗೆ, ಪಕ್ಷದ ಮಾತೃ ಸಂಘಟನೆ ಕಡೆಯಿಂದಲೂ ಇನ್ನೊಂದು ಪಟ್ಟಿ ದೆಹಲಿಗೆ ಹೋಗಿದೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.

ಹಾಗಾಗಿ, ವರಿಷ್ಠರು ಯಾರ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎನ್ನುವ ಕುತೂಹಲ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಮನೆ ಮಾಡಿದೆ. ಈಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೆ. ಸಿ. ರಾಮಮೂರ್ತಿಯವರ ರಾಜ್ಯಸಭೆಯ ಅವ ಮುಕ್ತಾಯಗೊಳ್ಳಲಿದೆ. ಆದರೆ, ಇವರಿಬ್ಬರನ್ನು ಮತ್ತೆ ರಾಜ್ಯದಿಂದ ವರಿಷ್ಠರು ನಿಲ್ಲಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದಿಂದ ಹೊರತಾದ, ಬಹುತೇಕ ಉತ್ತರ ಪ್ರದೇಶದಿಂದ ರಾಜ್ಯಸಭೆಯ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಮೂಲದವರಿಗೇ ಟಿಕೆಟ್ ನೀಡುವ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆಂಬ ಸುದ್ದಿಯೂ ಇದೆ.

ಈ ಹಿಂದೆ ವೆಂಕಯ್ಯ ನಾಯ್ಡುಗೆ ರಾಜ್ಯದಿಂದ ಟಿಕೆಟ್ ನೀಡಲು ಬಯಸಿದಾಗ ವೆಂಕಯ್ಯ ಸಾಕಯ್ಯ ಎನ್ನುವ ಹ್ಯಾಷ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಕರ್ನಾಟಕದವರಲ್ಲದ ನಿರ್ಮಲಾ ಸೀತಾರಾಮನ್ ಬಗ್ಗೆಯೂ ಅಲ್ಲಲ್ಲಿ ಅಪಸ್ವರ ಕೇಳಿ ಬರುತ್ತಿರುವುದರಿಂದ ಬಿಜೆಪಿ ವರಿಷ್ಠರು ರಿಸ್ಕ್ ತೆಗೆದುಕೊಳ್ಳದೇ ರಾಜ್ಯದ ಮತ್ತು ಪಕ್ಷಕ್ಕೆ ನಿಷ್ಠಾವಂತರಾಗಿರುವ ಇಬ್ಬರ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ. ಎಲ್. ಸಂತೋಷ್ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ನಿರ್ಮಲ್ ಕುಮಾರ್ ಸುರಾನ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿರುವ ಗೀತಾ ವಿವೇಕಾನಂದ ಇವರಿಬ್ಬರ ಹೆಸರನ್ನು ವರಿಷ್ಠರು ಪರಿಗಣಿಸುವ ಸಾಧ್ಯತೆಯಿದೆ.
ಪ್ರತಿ ಬಾರಿಯೂ ಸುರಾನ ಹೆಸರು ಮುನ್ನಲೆಗೆ ಬಂದು ಪರಿಗಣನೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ನಿರ್ಮಲ್‍ಕುಮಾರ್ ಸುರಾನಗೆ ರಾಜ್ಯಸಭೆಯ ಟಿಕೆಟ್ ಸಿಗುವ ಸಾಧ್ಯತೆಯಿದೆ.