ನಿರ್ಮಲಾಗೆ ಮೊದಲ ಪ್ರಾಶಸ್ತ್ಯದಲ್ಲೇ 46 ಮತ

Spread the love

ಬೆಂಗಳೂರು,ಜೂ.10- ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಮೊದಲ ಪ್ರಾಶಸ್ತ್ಯದಲ್ಲೇ 46 ಮತಗಳನ್ನು ಚಲಾಯಿಸಲಾಗಿದೆ. ಹೀಗಾಗಿ ಅವರ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಈ ಮೊದಲು ಬಿಜೆಪಿಯ ಮೊದಲನೇ ಮತ್ತು 2ನೇ ಅಭ್ಯರ್ಥಿಗೆ ತಲಾ 45 ಮತಗಳನ್ನು ಶಾಸಕಾಂಗ ಸಭೆಯಲ್ಲಿ ನಿಗದಪಡಿಸಲಾಗಿತ್ತು.

ಆದರೆ ಯಾವುದಾದರೂ ಒಂದು ಮತ ಅಸಿಂಧುವಾದರೆ ಗೆಲುವಿಗೆ ತೊಡಕಾಗಬಹುದೆಂಬ ಹಿನ್ನೆಲೆಯಲ್ಲಿ ನಿರ್ಮಲಾಸೀತಾರಾಮನ್‍ಗೆ 46 ಮತಗಳನ್ನು ಶಾಸಕರು ಚಲಾಯಿಸಿದರು. 2ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಿತ್ರನಟ ಜಗ್ಗೇಶ್‍ಗೆ 44 ಮತಗಳನ್ನು ಚಲಾಯಿಸಲಾಗಿದೆ. 2ನೇ ಪ್ರಾಶಸ್ತ್ಯದಲ್ಲಿ ಅವರ ಗೆಲುವು ಕೂಡ ಸುಗಮವಾಗಲಿದೆ.

3ನೇ ಅಭ್ಯರ್ಥಿಯಾಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಲೆಹರ್ ಸಿಂಗ್‍ಗೆ 32 ಮತಗಳನ್ನು ನಿಗದಿಪಡಿಸಲಾಗಿದೆ. ಬೆಳಗ್ಗೆ ನಡೆದ ಶಾಸಕಾಂಗ ಸಭೆಯಲ್ಲಿ ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಬೇಕೆಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದರು.

ಇದರಂತೆ ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಪಕ್ಷದ 119 ಶಾಸಕರಿಗೆ ಯಾವ ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂಬುದನ್ನು ಸೂಚನೆ ನೀಡಿದರು. ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್, ಶಾಸಕರಾದ ರವಿಸುಬ್ರಹ್ಮಣ್ಯ, ಪಿ.ರಾಜೀವ ಶಾಸಕರಿಗೆ ಮತ ಚಲಾಯಿಸುವ ಕುರಿತಂತೆ ಮತ್ತೊಂದು ಬಾರಿ ಸಲಹೆ ನೀಡಿದರು.

 

Facebook Comments