ಫೆ.19 ಮತ್ತು 20 ರಂದು ಆದಿಚುಂಚನಗಿರಿ ಡಾ. ನಿರ್ಮಲಾನಂದನಾಥ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ

ಬೆಂಗಳೂರು :- ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ, ಜಗದ್ಗುರು ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ 7ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಫೆ.19 ಮತ್ತು 20 ರಂದು ಆದಿಚುಂಚನಗಿರಿ ಕ್ಷೇತ್ರದಲ್ಲಿ ಜರುಗಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಎಸ್.ರಾಮೇಗೌಡ, ಮಹೋತ್ಸವದ ಅಂಗವಾಗಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮೇಳವನ್ನು ಆಯೋಜಿಸಲಾಗಿದೆ.

ಜೊತೆಗೆ ಜೆವಿಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನವನ್ನು ಸಹ ಮಾಡಲಾಗುವುದು ಎಂದು ತಿಳಿಸಿದರು. ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನೊಳಗೊಂಡ ವಸ್ತುಪ್ರದರ್ಶನದಲ್ಲಿ ತಜ್ಞರು ಮತ್ತು ವಿದ್ವಾಂಸರಿಂದ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಮೌಲ್ಯಗಳ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಹಮ್ಮಿಕೊಳ್ಳಲಾಗಿದೆ.

ಇದೇ ವೇಳೆ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಿದವರಿಗೆ ನಮ್ಮ ಸಂಸ್ಥೆ ವತಿಯಿಂದ ವಿಜ್ಞಾತಂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2016ರಲ್ಲಿ ಡಾ.ಸಿ.ಎನ್.ಆರ್.ರಾವ್ ಅವರಿಗೆ, 2017ರಲ್ಲಿ ಡಾ.ಯು.ಆರ್.ರಾವ್ ಅವರಿಗೆ, 2018ರಲ್ಲಿ ಮಮ್ತಾಜ್ ಅಲಿ ಅವರಿಗೆ, 2019ರಲ್ಲಿ ಶರತ್‍ಚಂದ್ರ ಅವರಿಗೆ ವಿಜ್ಞಾತಂ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಬಾರಿಯೂ ವಿದ್ವಾಂಸರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಮೇಳದಲ್ಲಿ ವಿಜ್ಞಾನಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ತಾಂತ್ರಿಕ, ವೈದ್ಯಕೀಯ ಕಾಲೇಜು, ಶಿಕ್ಷಣ ಮಹಾ ವಿದ್ಯಾಲಯಗಳು ಇತರೆ ಪದವಿ ಕಾಲೇಜುಗಳು ಭಾಗವಹಿಸಲಿವೆ. ಇದರಲ್ಲಿ ಗೆದ್ದವರಿಗೆ ಪ್ರಥಮ 15 ಸಾವಿರ, ದ್ವಿತೀಯ 10ಸಾವಿರ, ತೃತೀಯ 7 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಡಾ.ಎನ್.ಎಸ್.ರಾಮೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವರಾಮ್, ಲೋಕೇಶ್, ನಂಜುಂಡೇಗೌಡ ಮತ್ತಿತರರು ಉಪಸ್ಥಿತರಿದ್ದರು.