ಒಕ್ಕಲಿಗ ಸಮುದಾಯದ ಮೀಸಲಾತಿ, ಪ್ರಾಧಿಕಾರ ರಚನೆ ಕುರಿತಂತೆ ಫೆ.20ರಂದು ಸಭೆ

ಬೆಂಗಳೂರು, ಫೆ.18- ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಹಾಗೂ ಒಕ್ಕಲಿಗರ ಪ್ರಾಧಿಕಾರ ರಚನೆ ಕುರಿತಂತೆ ಫೆ.20ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತದೆ.  ನಗರ ಪ್ರದೇಶದ ಬಡ ಒಕ್ಕಲಿಗರಿಗೆ ಒಬಿಸಿ ಅವಕಾಶ ಗಳು ದೊರೆಯಬೇಕು. ಹಾಗೆಯೇ ಮೀಸಲಾತಿ ಪ್ರಮಾಣ ಹೆಚ್ಚಳವಾಗಬೇಕು. ಸಮು ದಾಯದ ಶ್ರೇಯೋಭಿವೃದ್ಧಿಗೆ ಒಕ್ಕಲಿಗರ ಪ್ರಾಧಿಕಾರ ರಚನೆ ಮಾಡಬೇಕೆಂಬ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗುತ್ತದೆ. ಸರ್ಕಾರಕ್ಕೆ ಸಲ್ಲಿಸಬೇಕಿರುವ ಮನವಿ ಪತ್ರದ ರೂಪುರೇಷೆಗಳ ಬಗ್ಗೆಯೂ ಅಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.

ಸ್ಫಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಯವರು, ಸಂವಿಧಾನ ತಜ್ಞರು, ಆಡಳಿತ ಕ್ಷೇತ್ರದ ನಿಪುಣರು, ಸಾಹಿತಿಗಳು ಹಾಗೂ ಚಿಂತಕರನ್ನೊಳಗೊಂಡು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಿಂದಾಗಿ ರಾಜ್ಯದ ಪ್ರಬಲ ಸಮುದಾಯವಾಗಿರುವ ಒಕ್ಕಲಿಗ ಜನಾಂಗದ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆಯ ಹೋರಾಟಕ್ಕೆ ಆನೆಬಲ ಬಂದಂತಾಗಿದೆ.

ಸಭೆಯಲ್ಲಿ ವ್ಯಕ್ತವಾಗಿರುವ ಒಟ್ಟಾರೆ ಅಭಿಪ್ರಾಯದಂತೆ ಒಕ್ಕಲಿಗ ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣ ವನ್ನು ಹೆಚ್ಚಳ ಮಾಡಬೇಕು. ಒಕ್ಕಲಿಗ ಸಮುದಯಾದ 115 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕೆಂಬ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿರುವ ಒಕ್ಕಲಿಗ ಸಮುದಾಯ ಕೃಷಿ ಅವಲಂಬಿತ ರಾಗಿದ್ದಾರೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಈ ಸಮುದಾಯ ಸಾಕಷ್ಟು ಹಿಂದುಳಿದಿರುವುದರಿಂದ ಸಾಮಾಜಿಕ ನ್ಯಾಯ ಒದಗಿಸಲು ಸಮುದಾಯದ ಮುಖಂಡರು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿತ್ತು. ಬೇರೆ ಬೇರೆ ಸಮುದಾಯಗಳ ರೀತಿಯಲ್ಲಿ ನಾವು ಕೂಡ ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ಸರ್ಕಾರದಲ್ಲಿರುವ ಸಚಿವರು ಮತ್ತು ಶಾಸಕರು ಒತ್ತಡ ಹಾಕಬೇಕೆಂಬ ಅಭಿಪ್ರಾಯವೂ ಕೇಳಿಬಂದಿದೆ.

ಮೀಸಲಾತಿ ಪ್ರಮಾಣ ಹೆಚ್ಚಾದರೆ ಉದ್ಯೋಗ, ಶಿಕ್ಷಣ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಕೆಲವರು ಸಲಹೆ ಮಾಡಿದ್ದಾರೆ. ನಾವು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷದ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿಲ್ಲ. ಮೀಸಲಾತಿ ಹೆಚ್ಚಳ ಮಾಡಬೇಕೆಂಬ ನಮ್ಮ ಹೋರಾಟ ಶಾಂತಿಯುತವಾಗಿ ಇರಬೇಕು. ಇದರಲ್ಲಿ ಸಣ್ಣ ವ್ಯತ್ಯಾಸವಾಗದಂತೆ ಒಗ್ಗಟ್ಟು ಕಾಪಾಡಬೇಕೆಂದು ಹಿರಿಯರು ಸೂಚಿಸಿದ್ದಾರೆ.

ಮೊದಲು ಸರ್ಕಾರದ ಮುಂದೆ ಮನವಿ ಸಲ್ಲಿಸಬೇಕು. ಆನಂತರ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ನೋಡಿಕೊಂಡು ನಮ್ಮ ಹೋರಾಟ ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ತೀರ್ಮಾನಿಸೋಣ ಎಂಬ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಮತ್ತು ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಹೋರಾಟ ಸಮಿತಿಗಳನ್ನು ರಚಿಸಲು ಸಭೆ ಯಲ್ಲಿ ತೀರ್ಮಾನಿಸಲಾಗಿದೆ.

ಅದರಂತೆ ನ್ಯಾಯಮೂರ್ತಿ ಚಂದ್ರಶೇಖರಯ್ಯ, ನಿವೃತ್ತ ಐಎಎಸ್ ಅಧಿಕಾರಿಗಳಾದ ವೈ.ಕೆ.ಪುಟ್ಟಸ್ವಾಮಿಗೌಡ, ಶಂಕರಲಿಂಗೇಗೌಡ, ಟಿ.ತಿಮ್ಮೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಟ್ಯಾಗೂರ್, ಡಾ.ಎಚ್.ಎನ್.ಕೃಷ್ಣ, ಸಿ.ಚಿಕ್ಕಣ್ಣ, ಹಿ.ಚಿ.ಬೋರಲಿಂಗಯ್ಯ, ಪುಟ್ಟೇಗೌಡ ಅವರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ.

ಈ ಎರಡೂ ಸಮಿತಿಯೂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿ ಪತ್ರದ ರೂಪುರೇಷೆ ಸಿದ್ಧಪಡಿಸಲಿವೆ. ಇದರ ಬಗ್ಗೆ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ನೇತೃತ್ವ ದಲ್ಲಿ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ.