Home ಇದೀಗ ಬಂದ ಸುದ್ದಿ ಸಿಗಂಧೂರಿಗೆ ಸಂಪರ್ಕ ಕಲ್ಪಿಸುವ ದೇಶದ 2ನೇ ಅತಿದೊಡ್ಡ ತೂಗು ಸೇತುವೆ ಲೋಕಾರ್ಪಣೆ

ಸಿಗಂಧೂರಿಗೆ ಸಂಪರ್ಕ ಕಲ್ಪಿಸುವ ದೇಶದ 2ನೇ ಅತಿದೊಡ್ಡ ತೂಗು ಸೇತುವೆ ಲೋಕಾರ್ಪಣೆ

0
ಸಿಗಂಧೂರಿಗೆ ಸಂಪರ್ಕ ಕಲ್ಪಿಸುವ ದೇಶದ 2ನೇ ಅತಿದೊಡ್ಡ ತೂಗು ಸೇತುವೆ ಲೋಕಾರ್ಪಣೆ

ಸಾಗರ,ಜು.14- ತೀವ್ರ ರಾಜಕೀಯ ಸಮರಕ್ಕೂ ಕಾರಣವಾಗಿ, ಹಲವು ವಿರೋಧದ ನಡುವೆಯೂ ಬಹುನಿರೀಕ್ಷಿತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ದೇಶದ ಅತಿ ದೊಡ್ಡ ಎರಡನೇ ತೂಗುಸೇತುವೆ ಸಾರ್ವಜನಿಕರ ಸೇವೆಗೆ ಇಂದು ಲೋಕಾರ್ಪಣೆ ಗೊಂಡಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರುಹಾಜರಿ ನಡುವೆಯೂ ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರು ಸಾಗರದ ಗಾಂಧಿ ಮೈದಾನದಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಟನ್‌ ಒತ್ತುವ ಮೂಲಕ ತೂಗುಸೇತುವೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಇದರಿಂದಾಗಿ ಸಿಗಂಧೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಇನ್ನು ಮುಂದೆ ಭಕ್ತರು ಲಾಂಜ್‌ನಲ್ಲಿ ಪ್ರಯಾಣಿಸದೆ ನೇರವಾಗಿ ಸೇತುವೆ ಮೂಲಕ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಬಹುದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸ್ಥಳೀಯ ಶಾಸಕ ಗೋಪಾಲಕೃಷ್ಣ ಬೇಳೂರು ಅವರುಗಳ ಗೈರುಹಾಜರಿ ನಡುವೆಯೇ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಅರಗಜ್ಞಾನೇಂದ್ರ, ಶಾಸಕ ಚನ್ನಬಸಪ್ಪ ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.

ರಾಜ್ಯ ಸರ್ಕಾರದ ಪರವಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮಾತ್ರ ಭಾಗಿಯಾಗಿದ್ದರು. ನೆರೆದಿದ್ದ ಸಾವಿರಾರು ಜನರ ಹರ್ಷೋದ್ಘಾರದ ನಡುವೆಯೇ ವಿಶೇಷ ಪೂಜೆ, ಪುನಸ್ಕಾರ, ಹೋಮ-ಹವನದ ನಡುವೆ ತೂಗುಸೇತುವೆಯನ್ನು ಲೋಕಾರ್ಪಣೆ ಗೊಳಿಸಲಾಯಿತು.

ಶರಾವತಿ ಹಿನ್ನೀರಿನ ಮೇಲೆ ನಿರ್ಮಿಸಲಾದ ಬಹುನಿರೀಕ್ಷಿತ ಕೇಬಲ್‌-ಸ್ಟೇಡ್‌ ಸೇತುವೆಯು ರಾಜ್ಯದಲ್ಲಿಯೇ ಅತಿ ಉದ್ದವಾಗಿದೆ ಮತ್ತು ದೇಶದಲ್ಲಿಯೇ ಎರಡನೇ ಅತಿ ಉದ್ದವಾದ ಸೇತುವೆಯಾಗಿದೆ. ಇದರ ನಿರ್ಮಾಣಕ್ಕೆ ಒಟ್ಟು 473 ಕೋಟಿ ರೂ. ವೆಚ್ಚವಾಗಿದೆ.ಲಿಂಗಮನಕ್ಕಿ ಜಲಾಶಯದ ಬಳಿಕ ಸಾಗರ ತಾಲೂಕಿನ ತುಮರಿ ಗ್ರಾ.ಪಂ ವ್ಯಾಪ್ತಿಯ ಅನೇಕ ಹಳ್ಳಿಗಳಿಗೆ ಲಾಂಚೇ ಸಂಪರ್ಕ ಸಾಧನವಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಲಾಂಚ್‌ ಸೇವೆ ಇತ್ತು. ಸಂಜೆ ನಂತರ ಈ ಗ್ರಾಮಗಳಿಂದ ಸಾಗರಕ್ಕೆ ಸಂಪರ್ಕ ಕೊಂಡಿ ಇರಲಿಲ್ಲ. ಈಗ ಗ್ರಾಮಸ್ಥರಿಗೆ ದೊಡ್ಡ ಅನುಕೂಲರವಾಗಿದೆ.

ಈ ಸೇತುವೆಯು ಕೇಬಲ್‌-ಸ್ಟೇಡ್‌ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಇದು ಎಕ್‌ಸಟ್ರಾಡೋಸ್ಡ್‌ ಬ್ಯಾಲೆನ್‌ಸ್ಡ ಕ್ಯಾಂಟಿಲಿವರ್‌ ಸೇತುವೆ ವಿನ್ಯಾಸ ಹೊಂದಿದೆ. ದೇಶದಲ್ಲೇ ಮೊದಲನೆ ಅತಿ ದೊಡ್ಡ ಕೇಬಲ್‌ ಹಿಡಿತದ ಸೇತುವೆ ಗುಜರಾತ್‌ನ ದ್ವಾರಕಾದಲ್ಲಿದೆ. ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ಹಲವಾರು ಹಳ್ಳಿಗಳಿಗೆ ಹಾಗೂ ಸಿಗಂಧೂರು ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. 70ರ ದಶಕದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಮ್‌ ಕಟ್ಟಿದಾಗ ಅದರ ಹಿನ್ನೀರಿನಿಂದ ಸಾಗರ ತಾಲೂಕಿನ ಶರಾವತಿ ಕಣಿವೆ 2 ಭಾಗವಾಗಿ ವಿಭಜನೆಯಾಗಿತ್ತು.

ಸೇತುವೆ ವಿಶೇಷತೆಗಳು: ಸಿಗಂದೂರು ಸೇತುವೆ 2.44 ಕಿ.ಮೀ. ಉದ್ದವಿದೆ. ಇದರಲ್ಲಿ 740 ಮೀಟರ್‌ ಮಾತ್ರ ಕೇಬಲ್‌ ಸೇತುವೆ ಇದೆ. 30ರಿಂದ 55 ಮೀಟರ್‌ ಎತ್ತರದ 17 ಪಿಲ್ಲರ್‌ಗಳಿವೆ. ಇದು ದ್ವಿಪಥ ಹೊಂದಿದ್ದು, 2 ಕಡೆ 1.5 ಮೀಟರ್‌ ಅಗಲದ ಪುಟ್ಪಾತ್‌ ಕೂಡ ಇದೆ. ಪ್ರತಿ ಪಿಲ್ಲರ್‌ ಫೌಂಡೇಶನ್‌ 177 ಮೀಟರ್‌ ಅಂತರವಿದೆ. ಈ ಸೇತುವೆಗೆ 30 ಮೀಟರ್‌ ಅಂತರದಲ್ಲಿ 80 ಪಿಲ್ಲರ್‌ ಫೌಂಡೇಶನ್‌ ಹಾಕಬೇಕಿತ್ತು. ಆದರೆ ಇದನ್ನು 19 ಪಿಲ್ಲರ್‌ ಫೌಂಡೇಶನ್‌ನಲ್ಲೇ ಮುಗಿಸಲಾಗಿದೆ. 177, 105, 93 ಮೀಟರ್‌ ಅಂತರದಲ್ಲಿ ಪಿಲ್ಲರ್‌ಗಳಿವೆ. ಇದು 2019ರಲ್ಲಿ ಘೋಷಣೆಯಾಗಿದ್ದು ಆಗ ಇದು ನೂತನ ತಂತ್ರಜ್ಞಾನವಾಗಿತ್ತು. ಈಗ ಇದಕ್ಕಿಂತ ಸುಧಾರಿತ ತಂತ್ರಜ್ಞಾನಗಳು ಬಂದಿವೆ.

ಸೇತುವೆಯು 604 ಬಾಕ್‌್ಸ ಗಿರ್ಡರ್‌ ವಿಭಾಗಗಳು, 1.8 ಮೀಟರ್‌ ವ್ಯಾಸದ 164 ಪೈಲ್‌ಗಳು, ನಾಲ್ಕು ಪೈಲನ್‌ಗಳಲ್ಲಿ 96 ಕೇಬಲ್‌ಗಳು ಮತ್ತು ಗೋಳಾಕಾರದ ಬೇರಿಂಗ್‌ಗಳನ್ನು ಹೊಂದಿದೆ. ಹೊಸ ಸೇತುವೆಯು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆ ಇದೆ.

ಸ್ಥಳೀಯ ನಿವಾಸಿಗಳು, ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ,ಮತ್ತು ಮಾಜಿ ಸಚಿವ ಕಾಗೋಡು ತಿಮಪ್ಪ ಅವರ ಪ್ರಯತ್ನದ ಪರಿಣಾಮವಾಗಿ ಎಂಒಆರ್‌ಟಿಎಚ್‌ ಸೇತುವೆ ನಿರ್ಮಾಣವನ್ನು ಕೈಗೆತ್ತಿಕೊಂಡಿತ್ತು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಗಡ್ಕರಿ ಅವರು, 625 ರೂ. ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ – ಸಾಗರದಿಂದ ಮರುಕುಟಿಕದ ವರೆಗೆ ಸಾಗರ ನಗರದ ಬೈಪಾಸ್‌‍ ಸೇರಿ ದ್ವಿಪಥ ಸಂಪರ್ಕ ರಸ್ತೆಯ ಶಂಕುಸ್ಥಾಪನೆಯನ್ನು ನೆರವೇರಿಸಿದರು.