8ನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ, ತೇಜೆಸ್ವಿ ಯಾದವ್ ಡಿಸಿಎಂ

Social Share

ಪಾಟ್ನಾ,ಆ.10- ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿ ಮುರಿದು ಕೊಂಡು ಮಹಾಘಟ್ ಬಂಧನ್ ಜೊತೆ ಸೇರಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಎಂಟನೆ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಆರ್‍ಜೆಡಿ ನಾಯಕ ತೇಜೆಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆಯಷ್ಟೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಅವರು, ಬೆನ್ನ ಹಿಂದೆಯೇ ಸರ್ಕಾರ ರಚನೆಗೆ 164 ಶಾಸಕರ ಸಂಖ್ಯಾ ಬಲದೊಂದಿಗೆ ರಾಜ್ಯಪಾಲ ಫಗು ಚಹ್ವಾಣ್ ನಿತೀಶ್ ಕುಮಾರ್ ಅವರ ಬಳಿ ಹಕ್ಕು ಪ್ರತಿಪಾದಿಸಿದರು.

ಹಲವು ವಿದ್ಯಮಾನಗಳಿಂದ ಮೈತ್ರಿಗೆ ಧಕ್ಕೆ:

ಈ ನಡುವೆ ಬಿಜೆಪಿ-ಜೆಡಿಯು ಮೈತ್ರಿ ಮುರಿದು ಬೀಳಲು ಕಾರಣವೇನು ಎಂಬ ಚರ್ಚೆಗಳು ನಾನಾ ದಿಕ್ಕು ಪಡೆದು ಕೊಂಡಿವೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಸರ್ಕಾರಗಳನ್ನು ಪತನಗೊಳಿಸಿದ ಮಾದರಿಯಲ್ಲೇ ಬಿಜೆಪಿ ಬಿಹಾರದಲ್ಲಿ ಮಿತ್ರ ಪಕ್ಷಕ್ಕೆ ದ್ರೋಹ ಬಗೆದು ರಾಜಕೀಯ ಅಪತ್ಯ ಸಾಸಲು ಮುಂದಾಗಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.

ಮೂಲಗಳ ಪ್ರಕಾರ ಜೆಡಿಯುನ ಶಾಸಕರನ್ನು ತನ್ನತ್ತ ಸೆಳೆದು, ನಿತೀಶ್ ಕುಮಾರ್ ಅವರ ಹಿಡಿತ ಮತ್ತು ಪಕ್ಷದ ಮೇಲಿನ ಪ್ರಾಬಲ್ಯವನ್ನು ಕಡಿಮೆ ಮಾಡಲು ಬಿಜೆಪಿ ಯತ್ನ ನಡೆಸಿತ್ತು. ಬಿಜೆಪಿ ನಾಯಕರು ಜೆಡಿಯುನ ಆರು ಮಂದಿ ಶಾಸಕರ ಜೊತೆ ನಡೆಸಿರುವ ಸಂಭಾಷಣೆ ವೈರಲ್ ಆಗಿದೆ.

ನಿತೀಶ್ ಅವರನ್ನು ಮೂಲೆಗುಂಪು ಮಾಡಿ ಲೋಕಜನ ಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರನ್ನು ಮುಂಚೂಣಿಗೆ ತರಲು ಹೊಸ ಮಾದರಿಯನ್ನು ಅನುಸರಿಸಲಾಗಿತ್ತು. ಈ ಬಗ್ಗೆ ಗುಪ್ತದಳದ ಮಾಹಿತಿ ಪಡೆದು ಎಚ್ಚೆತ್ತುಕೊಂಡ ನಿತೀಶ್ ಕುಮಾರ್ ದಿಢೀರ್ ಬಿಜೆಪಿ ಸಖ್ಯ ಕಡಿದು ಕೊಳ್ಳುವ ತೀರ್ಮಾನ ಮಾಡಿದರು ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯನ್ನು ಇಬ್ಬಾಗಿಸಿ, ಏಕನಾಥ್ ಶಿಂಧೆಯನ್ನು ಎತ್ತಿಕಟ್ಟಿದ್ದಲ್ಲದೆ ಪಕ್ಷ ಹೊಳಾಗುವಂತೆ ಮಾಡಲಾಗಿತ್ತು. ಪಕ್ಷದ ಚಿನ್ನೆಯ ಕುರಿತು ತಕರಾರು ಸೃಷ್ಟಿಯಾಗಿತ್ತು. ಮೂಲ ಪಕ್ಷದ ನಾಯಕತ್ವದ ಬುಡವೇ ಅಲುಗಾಡಿ ಹೋಗಿದೆ.

ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಪಡ್ನವೀಸ್‍ರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಿಂಬಡ್ತಿ ನೀಡಿ, ಶಿಂಧೆಯನ್ನು ಮುಖ್ಯಮಂತ್ರಿ ಮಾಡಿ ಶಿವಸೇನೆಯನ್ನು ಒಡೆದು ಹಾಕಲಾಗಿತ್ತು. ಅದೇ ಮಾದರಿಯಲ್ಲಿ ಜೆಡಿಯು ಅಸ್ತಿತ್ವವನ್ನೆ ಅಲುಗಾಡಿಸಲು ಸಂಚು ನಡೆದಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.

ಕಾಲಕ್ಕನುಗುಣವಾಗಿ ರಾಜಕೀಯ ಲಾಭಕ್ಕಾಗಿ ಪಕ್ಷ ಬದಲಾವಣೆ ಮಾಡುವ ಇತಿಹಾಸ ಹೊಂದಿರುವ ನಿತೀಶ್ ಕುಮಾರ್, ಬಿಜೆಪಿ ಮಿತ್ರದ್ರೋಹ ಎಸಗುವ ಮುನ್ನವೇ ಎಚ್ಚೆತ್ತು ಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಆರ್‍ಜೆಡಿ, ಜೆಡಿಯು ಜೊತೆ ಸಂಘರ್ಷ ರಾಜಕಾರಣ ಮಾಡದೆ ಸಂಧಾನದ ಮಾದರಿ ಅನುಸರಿಸಿದ್ದು, ಮತ್ತೆ ಮಹಾಘಟ್ ಬಂಧನ್ ಒಗ್ಗೂಡಲು ಕಾರಣವಾಗಿದೆ.

ನಿತೀಶ್ ಕುಮಾರ್ ಅವರು ಮೊದಲಿನಿಂದಲೂ ಬಿಜೆಪಿ ಜೊತೆ ಹಲವು ತಕರಾರುಗಳನ್ನು ಹೊಂದಿದ್ದರು. ಅಕಾರಕ್ಕಾಗಿ ಎನ್‍ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೂ, ಬಿಜೆಪಿ ಪ್ರತಿಪಾದಿಸುವ ಎನ್‍ಆರ್‍ಸಿ, ಏಕರೂಪ ನಾಗರಿಕ ಸಂಹಿತೆ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‍ಗೆ ವಿರೋಧ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ತಕರಾರು, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಆಕ್ಷೇಪ, ಪೆಗಾಸಸ್ ಹಗರಣ, ಬಿಹಾರದ ಜಾತಿ ಜನಗಣತಿ ಸೇರಿದಂತೆ ಹಲವು ವಿಷಯಗಳಲ್ಲಿ ಜೆಡಿಯು ವಿರೋಧಾಭಾಸಗಳನ್ನು ಹೊಂದಿತ್ತು.

ಪ್ರಾದೇಶಿಕ ಪಕ್ಷಗಳಿಗೆ ಕರಾಳ ಭವಿಷ್ಯವಿದೆ ಎಂದು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆ ನಿತೀಶ್‍ರನ್ನು ಕೆರಳಿಸಿತ್ತು ಎನ್ನಲಾಗಿದೆ. 2020ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಎನ್‍ಡಿಎ ಮಿತ್ರಕೂಡದ ಜೊತೆ ಸೇರಿ ಜೆಡಿಯು ಸ್ಪರ್ಧೆ ಮಾಡಿತ್ತು.

ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ, ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಸಾಸಿತ್ತು. ಸ್ಪರ್ಧೆಯ ವಿಚಾರದಲ್ಲೂ ಬಿಜೆಪಿ ಮೇಲರಿಮೆ ಪ್ರದರ್ಶಿಸಿತ್ತು ಎಂದು ಹೇಳಲಾಗಿದೆ. ಹೀಗಾಗಿ ನಿತೀಶ್ ಮತ್ತೆ ಮಹಾ ಘಟ್‍ಬಂಧನ್‍ಗೆ ಮರಳಿದ್ದು, ಆರ್‍ಜೆಡಿ, ಕಾಂಗ್ರೆಸ್, ಎಡಪಕ್ಷಗಳು ಸೇರಿ ಏಳು ಪಕ್ಷಗಳ ಕೂಟದೊಂದಿಗೆ ಸರ್ಕಾರ ರಚಿಸಿದ್ದಾರೆ.

ಬಿಜೆಪಿ ನಿತೀಶ್ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದೆ. ಎನ್‍ಡಿಎ ಮಿತ್ರಕೂಟದಲ್ಲಿ ಚುನಾವಣೆ ಎದುರಿಸಿದ್ದ ನಿತೀಶ್ ರಾಜಕೀಯ ಧರ್ಮವನ್ನು ಮರೆತಿದ್ದಾರೆ. ಕಡಿಮೆ ಸ್ಥಾನ ಗೆದ್ದಿದ್ದರು, ನಾವು ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಈಗ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದ್ದಾರೆ. ನಿತೀಶ್ ವಲಸೆ ಹಕ್ಕಿ, ಅವರನ್ನು ನಂಬಿ ಹಲವು ಹಕ್ಕಿಗಳು ಕುಳಿತಿದ್ದು, ಅವು ಗೊಂದಲಕ್ಕೆ ಒಳಗಾಗಿವೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.

Articles You Might Like

Share This Article