BREAKING : ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ದಾಖಲೆ ಕೇಳುವಂತಿಲ್ಲ

Social Share

ಬೆಂಗಳೂರು,ನ.4- ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದಾಗ ವೈದ್ಯರು, ಇಲ್ಲವೇ ಸಿಬ್ಬಂದಿಯವರು ರೋಗಿಗಳಿಗೆ ದಾಖಲೆಗಳನ್ನು ಕೇಳಿ ಚಿಕಿತ್ಸೆ ನೀಡಲು ವಿಳಂಬ ಮಾಡಿ ಅವರ ಸಾವಿಗೆ ಕಾರಣರಾದರೆ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಸಿದೆ.

ತುಮಕೂರಿನಲ್ಲಿ ನಡೆದ ತಾಯಿ ಅವಳಿ ಶಿಶುಗಳ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸಿದರೆ ಇಲಾಖೆಯು ಸಂಬಂಧಪಟ್ಟ ಅಧಿಕಾರಿ, ನೌಕರರನ್ನು ಸೇವೆಯಿಂದ ವಜಾಗೊಳಿಸಿ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವುದಾಗಿ ಎಚ್ಚರಿಕೆ ಕೊಟ್ಟಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಸೇವೆಗಳ ಆಯುಕ್ತರು ಮಾರ್ಗಸೂಚಿಯನ್ನು ಹೊರಡಿಸಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಪಡಿತರಚೀಟಿ ಇಲ್ಲದೆಯೇ ಆಸ್ಪತ್ರೆಗೆ ದಾಖಲಿಸಿಕೊಂಡು ಆರೋಗ್ಯ ಸೇವೆಗಳನ್ನು ಒದಗಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಈವರೆಗೂ ರೋಗಿಗಳು, ತಾಯಿ, ಶಿಶುಗಳು, ಮಕ್ಕಳು ಸೇರಿದಂತೆ ಯಾವುದೇ ಒಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ದಾಖಲೆಗಳು ಅವಶ್ಯವಿರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ರೋಗಿಯು ದಾಖಲೆಗಳನ್ನು ವೈದ್ಯರಿಗೆ ಇಲ್ಲವೇ ಸಂಬಂಧಪಟ್ಟವರಿಗೆ ಹಾಜರುಪಡಿಸಬೇಕೆಂಬ ನಿಯಮವಿಲ್ಲ. ತಾಯಿ ಕಾರ್ಡ್, ಆಧಾರ್ ಕಾರ್ಡ್ ಪಡಿತರಚೀಟಿ ಸೇರಿದಂತೆ ಯಾವುದೇ ದಾಖಲೆಗಳಿಲ್ಲದಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ನೀಡುವುದು ಆಸ್ಪತ್ರೆಗಳ ಕರ್ತವ್ಯ ಎಂದು ಹೇಳಿದೆ.

ಆರೋಗ್ಯ ಸೇವೆಯನ್ನು ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ ವರ್ಗ, ಆರ್ಥಿಕ ಸ್ಥಿತಿಯನ್ನು ನೋಡಲೇಬಾರದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರೋಗಿಯ ನೋವು, ಸಂಕಟವನ್ನು ನಿವಾರಿಸುವುದು ವೈದ್ಯರ, ಶುಶ್ರೂಕರ ಮತ್ತು ಸಿಬ್ಬಂದಿಯವರ ಆದ್ಯ ಕರ್ತವ್ಯ ಎಂದು ಸುತ್ತೋಲೆಯಲ್ಲಿ ಹೇಳಿದೆ.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ದಾಖಲೆಗಳನ್ನು ನೀಡುವಂತೆ ಯಾರಿಗೂ ಒತ್ತಾಯಿಸಬಾರದೆಂದು ಆಯುಕ್ತರು ಸೂಚನೆಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.ತುಮಕೂರಿನಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಆಧಾರ್ ಮತ್ತು ತಾಯಿ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿ ಸಾವನ್ನಪ್ಪಿದ ಪ್ರಕರಣದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದೆ.

ತುಮಕೂರಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಅನಾಹುತ ಮಹಿಳೆಯೊಬ್ಬರು ಸಕಾಲಕ್ಕೆ ಸಿಗದೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ತಾಯಿಯ ಗರ್ಭದಲ್ಲಿದ್ದ ಅವಳಿ ಶಿಶುಗಳು ಕೂಡ ಮೃತಪಟ್ಟಿದ್ದವು.ತುಮಕೂರಿನ ಭಾರತಿ ನಗರದ ನಿವಾಸಿ ಕಸ್ತೂರಿ ಎಂಬ ಮಹಿಳೆಗೆ ತಾಯಿ ಕಾರ್ಡ್, ಆಧಾರ್‍ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ದಾಖಿಸಿಕೊಂಡು ಚಿಕಿತ್ಸೆ ಕೊಡಲು ನಿರಾಕರಿಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು.

ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು

# ಗರ್ಭಿಣಿ ಮಹಿಳೆ, ಅವಳಿ ಶಿಶು ಸಾವು, ವೈದ್ಯೆ ಸೇರಿದಂತೆ ನಾಲ್ವರು ಸಸ್ಪೆಂಡ್
ತುಮಕೂರು, ನ.4- ಚಿಕಿತ್ಸೆ ದೊರಕದೆ ಗರ್ಭಿಣಿ ಮಹಿಳೆ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿರುವ ವಿಚಾರಕ್ಕೆ ಸಂಬಂಸಿದಂತೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಸುಧಾಕರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಚಿಕಿತ್ಸೆ ಅಗತ್ಯವಿದ್ದಾಗ, ಯಾವುದೇ ದಾಖಲೆಗಳಿಲ್ಲದೆ ಇದ್ದರೂ ಚಿಕಿತ್ಸೆ ಕೊಡಬೇಕು, ತುರ್ತು ಸಂದರ್ಭದಲ್ಲಿ ಚಿಕಿತ್ಸೆಯೇ ಮುಖ್ಯವಾಗಿದ್ದು, ದಾಖಲೆಗಳ ಅವಶ್ಯಕತೆ ಇಲ್ಲ ಎಂಬ ಸುತ್ತೋಲೆ ಇದ್ದರೂ ಕರ್ತವ್ಯ ಲೋಪ ಮಾಡಿದ ಮೂವರು ಶುಶ್ರೂಷಕಿ ಮತ್ತು ವೈದ್ಯೆಯನ್ನು ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಶೋಚನೀಯ, ಅಮಾನವೀಯ ಘಟನೆ ನಡೆದು ಹೋಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದರೆ ಸೇವೆಯಿಂದ ವಜಾ, ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರ ನಿರ್ಧಾರ ಮಾಡಿದ್ದು, ಸೇವೆ ಒದಗಿಸುವುದೇ ಇಲಾಖೆಯ ಕರ್ತವ್ಯವಾಗಿದೆ ಎಂದರು.

ಹೆರಿಗೆ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ದಾದಿಯರಾದ ಯಶೋಧಾ, ಸವಿತಾ, ದಿವ್ಯ ಭಾರತಿ, ವೈದ್ಯೆ ಉಷಾ ಕರ್ತವ್ಯ ಲೋಪ ಮಾಡಿದ್ದಾರೆ, ರೋಗಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ, ಪ್ರಕರಣ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದರು.

ವೈದ್ಯರ ರಕ್ಷಣೆ ಮಾಡಿದ್ದೇವೆ, ಸಿಬ್ಬಂದಿಗೆ ಕಠಿಣ ಕಾನೂನಿನ ನೆರವು ನೀಡಿದ್ದೇವೆ. ಜನರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳದಿದ್ದರೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವೇಶನದಲ್ಲಿ ಮಂಡಿಸುವುದಾಗಿ ತಿಳಿಸಿದರು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಯಾರೇ ಅಕಾರಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳುತ್ತೇನೆ. ವರದಿ ಬಂದ ಮೇಲೆ ಅಮಾನತುಗೊಂಡವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು, ಯಾರನ್ನೂ ರಕ್ಷಿಸುವುದಿಲ್ಲ. ಈ ಪ್ರಕರಣ ದೊಡ್ಡ ಪಾಠ ಕಲಿಸಿದೆ. ಆರೋಗ್ಯ ಇಲಾಖೆಯಲ್ಲಿ ಚಿಕಿತ್ಸೆ ಸುಧಾರಿಸಲು ಕ್ರಮ ವಹಿಸಲಾಗುವುದು. ಬಡ-ಮಧ್ಯಮ ವರ್ಗದವರಿಗೆ ನೆರವು ನೀಡುವುದು ಇಲಾಖೆಯ ಧ್ಯೇಯ ಎಂದು ಸ್ಪಷ್ಟಪಡಿಸಿದರು.

ಹೆಣ್ಣು ಮಗುವಿಗೆ ನೆರವು: ಸಾವನ್ನಪ್ಪಿರುವ ಗರ್ಭಿಣಿಯೊಂದಿಗೆ ಐದು ವರ್ಷದ ಮಗು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಆಕೆ ನೆರೆ ಮನೆಯವರೊಂದಿಗೆ ಜಿಲ್ಲಾಸ್ಪತ್ರೆಗೆ ಬುಧವಾರ 9.30ಕ್ಕೆ ಬಂದಾಗ, ಶುಶ್ರೂಷಕಿಯರು ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಿರುವ ಸಿಸಿಟಿವಿ ದೃಶ್ಯಾವಳಿ ಇದೆ ಎಂದರು.

ಐದು ವರ್ಷದ ಹೆಣ್ಣು ಮಗುವಿಗೆ ಆಧಾರವಿಲ್ಲದಂತಾಗಿದೆ. ಕುಟುಂಬದವರು ಮಗುವಿನ ಆರೈಕೆ ಮಾಡಲು ಬರದಿದ್ದರೆ 18 ವರ್ಷಗಳ ಕಾಲ ಉಚಿತ ಶಿಕ್ಷಣ, ವೈಯಕ್ತಿಕವಾಗಿ ಆಕೆಯ ಹೆಸರಿನಲ್ಲಿ ಹಣ ಠೇವಣಿ, ಸರ್ಕಾರದಿಂದ ಠೇವಣಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯಬಾರದು ಎಂದರು.

ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ನೇಮಕ ಮಾಡಿದ್ದು, ಎರಡು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ನಂತರ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಚಿಂತಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಶಾಸಕ ಜ್ಯೋತಿ ಗಣೇಶ್, ಉಪಮೇಯರ್ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ , ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಎಎಸ್‍ಟಿ ಟಿ.ಜೆ.ಉದೇಶ್, ಡಿಎಚ್‍ಒ ಡಾ.ಮಂಜುನಾಥ್, ಡಿ.ಎಸ್.ಡಾ.ವೀಣಾ ಡಿವೈಎಸ್‍ಪಿ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

# ಇದೊಂದು ಅಮಾನವೀಯ ಘಟನೆ
ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲದ ನೆಪವೊಡ್ಡಿ ಗರ್ಭಿಣಿಗೆ ತುಮಕೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನಿರಾಕರಿಸಿದ ಪರಿಣಾಮ ತಾಯಿ ಹಾಗೂ ಆಕೆಯ ಗರ್ಭದಲ್ಲಿದ್ದ ಅವಳಿ ಮಕ್ಕಳು ಮೃತಪಟ್ಟಿವೆ. ಇದೊಂದು ಅಮಾನವೀಯ ಘಟನೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನವೀಯತೆ ಸತ್ತು ಬಡ ಜನರ ಪಾಡು ಹೇಳತೀರದಾಗಿದೆ. ತಾಯಿ ಮತ್ತು ಅವಳಿ ಮಕ್ಕಳ ಸಾವಿಗೆ ಕಾರಣರಾದ ತುಮಕೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ಕೃತ್ಯ ಕೊಲೆಗೆ ಸಮಾನವಾಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಟ್ವಿಟ್ಟರ್‍ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಿಗಳು ಎಲ್ಲ ಸಂದರ್ಭದಲ್ಲೂ ದಾಖಲೆಗಳನ್ನು ಕೈಯಲ್ಲಿ ಹಿಡಿದು ಹೋಗಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಮುಖ್ಯವೇ ಹೊರತು ದಾಖಲೆಯಲ್ಲ. ಆಸ್ಪತ್ರೆ ಸಿಬ್ಬಂದಿಯನ್ನು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ಜರುಗದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಅವರು ಹೇಳಿದ್ದಾರೆ.

Articles You Might Like

Share This Article