ಎಂದಿನಂತೆ ಮೆಟ್ರೋ ಓಡಾಟ, ನಿಟ್ಟುಸಿರುಬಿಟ್ಟ ಬಂದ್ ಭೀತಿಯಲ್ಲಿದ್ದ ಪ್ರಯಾಣಿಕರು

Namm-MEtro-----0

ಬೆಂಗಳೂರು, ಜೂ.4-ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೆಟ್ರೊ ರೈಲು ಸಿಬ್ಬಂದಿ ಇಂದು ಕರೆ ನೀಡಿದ್ದ ಬಂದ್ ಕೈಬಿಟ್ಟಿದ್ದರಿಂದ ಸಾರ್ವಜನಿಕರ ಪ್ರಯಾಣದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.  ಬೆಳಗ್ಗೆ 5.30ರಿಂದಲೇ ಬೈಯಪ್ಪನಹಳ್ಳಿ-ನಾಯಂಡನಹಳ್ಳಿ, ನಾಗಸಂದ್ರ-ಯಲಚೇನಹಳ್ಳಿ ನಡುವೆ ಮೆಟ್ರೊ ರೈಲು ಸಂಚಾರ ಎಂದಿನಂತೆ ಸಂಚರಿಸಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.   ವಾರದ ಪ್ರಾರಂಭದ ದಿನವಾದ ಇಂದು ರಾಜ್ಯದ ನಾನಾ ಭಾಗಗಳಿಂದ ಪ್ರಯಾಣಿಕರು ಬೆಳಗ್ಗೆ ನಗರಕ್ಕೆ ಆಗಮಿಸಿದ್ದರು. ಮೆಜೆಸ್ಟಿಕ್, ಮೈಸೂರು ರಸ್ತೆಯ ಸಾಟಲೈಟ್, ನವರಂಗ್, ಎನ್‍ಜಿಎಫ್ ಸೇರಿದಂತೆ ಮತ್ತಿತರ ಕಡೆ ಪ್ರಯಾಣಿಕರು ಮೆಟ್ರೊ ರೈಲು ಹತ್ತಿ ಸುರಕ್ಷಿತವಾಗಿ ಮನೆ ಸೇರಿದರು.

ಈ ನಡುವೆ ಇಂದು ಬಂದ್ ಮುಷ್ಕರ, ಬಂದ್ ನಡೆಸಿದರೆ ಅಂಥ ಸಿಬ್ಬಂದಿಗಳ ವಿರುದ್ದ ಎಸ್ಮಾ ಜಾರಿ ಮಾಡುವುದಾಗಿ ಬಿಎಂಆರ್‍ಸಿಎಲ್ ಎಚ್ಚರಿಕೆ ನೀಡಿತ್ತು. ಅಲ್ಲದೆ ಮಧ್ಯಾಹ್ನ ಹೈಕೋಟ್ ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಗೊಳ್ಳುವವರೆಗೂ ಬಂದ್‍ನಲ್ಲಿ ಪಾಲ್ಗೊಳ್ಳಬಾರದೆಂದ ತೀರ್ಮಾನಕ್ಕೆ ಸಿಬ್ಬಂದಿ ಬಂದರು.

ಕೊಚ್ಚಿಯಿಂದ ಆಗಮಿಸಿದ ತಂಡ:
ಇಂದು ಮೆಟ್ರೊ ರೈಲು ಸಿಬ್ಬಂದಿ ಬಂದ್ ನಡೆಸಬಹುದೆಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಎಂಆರ್‍ಸಿಎಲ್ ಕೇರಳದ ಕೊಚ್ಚಿಯಿಂದ 20 ಮಂದಿ ಲೋಕೋ ಪೈಲೈಟ್ ಸಿಬ್ಬಂದಿಯನ್ನು ನಗರಕ್ಕೆ ಕರೆಸಿಕೊಂಡಿತ್ತು. ಮೆಟ್ರೊ ರೈಲಿನ ಚಾಲಕರು ಸೇರಿದಂತೆ ಇದನು ನಿರ್ವಹಣೆ ಮಾಡುವ ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಂಡರೆ ಯಾವುದೇ ತೊಂದರೆ ಉಂಟಾಗದಂತೆ ನಿನ್ನೆಯೇ ಕೊಚ್ಚಿಯಿಂದ ಸಿಬ್ಬಂದಿ ಆಗಮಿಸಿತ್ತು.

ಬೇಡಿಕೆಗಳೇನು:
ವೇತನ ಹೆಚ್ಚಳ, ಅತಿಥಿ ಗೃಹ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ವಿಶೇಷ ಭತ್ಯೆ, ವಾರದ ರಜೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂಬುದು ಸಿಬ್ಬಂದಿಗಳ ಬೇಡಿಕೆಯಾಗಿತ್ತು. ಈ ಸಂಬಂಧ ಬಿಎಂಆರ್‍ಸಿಎಲ್ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬೇಡಿಕೆಗಳನ್ನು ಈಡೇರಿಸದಿದ್ದರೆ ಸಂಚಾರ ನಿಲ್ಲಿಸಿ ಪ್ರತಿಭಟನೆ ನಡೆಸುವುದಾಗಿ ಹಲವು ಬಾರಿ ಸಿಬ್ಬಂದಿಗಳು ಎಚ್ಚರಿಕೆ ನೀಡಿದ್ದರು.

Sri Raghav

Admin