ಇನ್ಮುಂದೆ ಮತ ಚಲಾಯಿಸಲು ಸರದಿ ಸಾಲಲ್ಲಿ ನಿಲ್ಲಬೇಕಿಲ್ಲ

Social Share

ಬೆಂಗಳೂರು,ಫೆ.16- ವಿದ್ಯಾವಂತರೆ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಪ್ರತಿ ಬಾರಿ ಕಡಿಮೆ ಮತದಾನವಾಗುವುದನ್ನು ತಪ್ಪಿಸಿ ಮತದಾನ ಹೆಚ್ಚಳ ಮಾಡಲು ಬಿಬಿಎಂಪಿ ಚುನಾವಣಾ ವಿಭಾಗ ಹೊಸ ಪ್ಲಾನ್ ಕಂಡುಕೊಂಡಿದೆ.
ಇನ್ಮುಂದೆ ಮತದಾರರು ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿಯವರು ಹೊಸ ಮೊಬೈಲ್ ಆ್ಯಪ್ ಸಿದ್ಧಪಡಿಸಿದ್ದಾರೆ.

ಈ ಆ್ಯಪ್ ಮೂಲಕ ಮುಂಬರುವ ಚುನಾವಣೆಗಳ ಸಂದರ್ಭದಲ್ಲಿ ಮತದಾರರು ಸಿನೆಮಾ, ರೈಲೆÉ್ವ ಟಿಕೆಟ್ ಮುಂಗಡ ಕಾಯ್ದಿರಿಸುವಂತೆ ಮತದಾನ ಮಾಡುವ ಸಮಯವನ್ನೂ ಮೊದಲೇ ನಿಗದಿ ಮಾಡಿಕೊಳ್ಳಬಹುದು. ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲದೆ ನಿಗದಿಪಡಿಸಿದ ಸಮಯಕ್ಕೆ ಬಂದು ಮತದಾನ ಮಾಡಿ ಹೋಗಬಹುದಾಗಿದೆ.

ಹೈಟೆಕ್ ಸಿಟಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಏನೇ ಕಸರತ್ತು ನಡೆಸಿದರೂ ಅದು ಯಶಸ್ವಿಯಾಗಿರಲಿಲ್ಲ. ವಿದ್ಯಾವಂತರು ತಾಸುಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಲು ನಿರಾಸಕ್ತಿ ಹೊಂದಿದ್ದಾರೆ ಎಂಬ ವಿಷಯ ಬಹಿರಂಗಗೊಂಡ ನಂತರ ಅವರ ಸಮಯ ಹಾಳಾಗದಂತೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸುವ ಭಾಗವಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಮುಂಬರುವ ದಿನಗಳಲ್ಲಿ ವಿಧಾನಸಭೆ, ಬಿಬಿಎಂಪಿ ಹಾಗೂ ಲೋಕಸಭೆ ಚುನಾವಣೆಗಳು ನಡೆಯಲಿರುವುದರಿಂದ ಪದೇ ಪದೇ ಕಡಿಮೆ ಮತದಾನವಾಗುವ ಬೆಂಗಳೂರಿನಲ್ಲಿ ಮತದಾನದ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಳ ಮಾಡುವ ಉದ್ದೇಶದಿಂದ ಇರುವ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೊಸ ಆ್ಯಪ್ ರೇಡಿ ಮಾಡಲಾಗಿದೆ.

ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಚುನಾವಣಾ ಆಯೋಗ ಈಗಿನಿಂದಲೇ ಸಿದ್ಧತೆ ನಡೆಸಿದೆ. ಅದರಲ್ಲೂ ಈ ಬಾರಿ ತಂತ್ರಜ್ಞಾನ ಆಧರಿಸಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿರುವುದು ವಿಶೇಷವಾಗಿದೆ. ಯಾವ ಸಮಯದಲ್ಲಿ ಮತದಾನ ಮಾಡಲು ಬರುತ್ತೇವೆ ಎಂಬುದನ್ನು ಮತದಾರರು ತಿಳಿಸಿದರೆ ಆ ಸಮಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಮತದಾನ ಮಾಡಲು ಅವಕಾಶ ಸಿಗುವಂತಹ ವ್ಯವಸ್ಥೆ ಮಾಡಲಾಗುತ್ತದೆ.

ಮೊಬೈಲ್ ಆ್ಯಪ್ನಲ್ಲಿ ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿ ನೀಡಲಾಗುತ್ತದೆ. ಅದರಲ್ಲಿ ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿದರೆ ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಮಾಹಿತಿ ದೊರೆಯಲಿದೆ.

ಇದರ ಜತೆಗೆ ನಾವು ಯಾವ ಸಮಯದಲ್ಲಿ ಮತದಾನ ಮಾಡಲು ಇಚ್ಚಿಸುತ್ತೇವೆ ಎಂಬ ಮಾಹಿತಿ ನಮೂದಿಸಿದರೆ ಅವರ ಮೊಬೈಲ್ಗೆ ಯೂನಿಕ್ ಸಂಖ್ಯೆ ಇರುವ ಎಸ್ಎಂಎಸ್ ಬರಲಿದೆ. ಅದನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿದರೆ ಮತದಾನಕ್ಕೆ ಸರದಿ ಸಾಲಿದ್ದರೂ ಕ್ಯೂನಲ್ಲಿ ನಿಲ್ಲದೆ ಪ್ರತ್ಯೇಕ ಮಾರ್ಗದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಪಿಂಕ್ ಮತಗಟ್ಟೆ ಮಾದರಿಯಲ್ಲೇ ಹಸಿರು ಮತಗಟ್ಟೆ
ಈ ಹಿಂದೆ ಮಹಿಳೆಯರನ್ನು ಮತದಾನದ ಕೇಂದ್ರಗಳತ್ತ ಸೆಳೆಯುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಪಿಂಕ್ ಮತಗಟ್ಟೆ ಮಾದರಿಯಲ್ಲೇ ಈ ಬಾರಿ ಪರಿಸರ ಸಂರಕ್ಷಣೆ ಜಾಗೃತಿಗಾಗಿ ಹಸಿರು ಮತಗಟ್ಟೆ ಸ್ಥಾಪಿಸಲಾಗುತ್ತಿದೆ.
ಹಸಿರು ಬಣ್ಣದ ಕಟ್ಟಡದಲ್ಲಿ ಸ್ಥಾಪಿಸಲಾಗುವ ಹಸಿರು ಮತಗಟ್ಟೆಯಲ್ಲಿ ಹಸಿರು ಗಿಡಗಳನ್ನು ಇಡುವುದರ ಜತೆಗೆ ಅಲ್ಲಿನ ಮತಗಟ್ಟೆಗೆ ಬಳಸುವ ವಿದ್ಯುತ್ಅನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿರುವುದು ವಿಶೇಷವಾಗಿದೆ.

ಮತದಾನದ ಪ್ರಮಾಣ ಹೆಚ್ಚಳವಾಗುವ ವಿಶ್ವಾಸ
ಏನೇ ಕಸರತ್ತು ನಡೆಸಿದರೂ ಬೆಂಗಳೂರಿನಲ್ಲಿ ನಡೆದಿರುವ ಇದುವರೆಗಿನ ಮತದಾನದ ಪ್ರಮಾಣ ಶೇ.55 ದಾಟಿಲ್ಲ. ಹೀಗಾಗಿ ಈ ಬಾರಿ ಶೇ.10ರಷ್ಟು ಮತದಾನಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿರುವುದರಿಂದ ಈ ಬಾರಿ ಹೊಸ ಪ್ಲಾನ್ಗೆ ಮೊರೆ ಹೋಗಿದ್ದೇವೆ. ಇದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

#Nomorequeuing, #vote, #Voting, #BBMP,

Articles You Might Like

Share This Article