ಶಿವಸೇನೆ ಜತೆ ಎನ್ಸಿಪಿ ಮೈತ್ರಿ ಇಲ್ಲ : ಪವಾರ್ ಸ್ಪಷ್ಟೋಕ್ತಿ
ಮುಂಬೈ, ನ.6- ಚುನಾವಣಾ ಫಲಿತಾಂಶ ಪ್ರಕಟವಾಗಿ ಎರಡು ವಾರಗಳಾದರೂ ಸರ್ಕಾರ ರಚನೆ ಕಗ್ಗಂಟಾಗಿ ಮುಂದುವರಿದಿದ್ದು, ಅಧಿಕಾರ ಗದ್ದುಗೆ ಏರಲು ಪ್ರಮುಖ ಪಕ್ಷಗಳ ನಡುವೆ ಕಸರತ್ತು ನಡೆಯುತ್ತಿರುವ ಸಂದರ್ಭದಲ್ಲೇ ಶಿವಸೇನೆ ಜತೆ ಮೈತ್ರಿ ಇಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ನಾಯಕ ಶರದ್ಪವಾರ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ-ಶಿವಸೇನೆ ಸರ್ಕಾರ ರಚಿಸಬೇಕೆಂಬ ಜನರ ಬಯಕೆ. ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿ ಕಾರ್ಯನಿರ್ವಹಿಸುವಂತೆ ಮತದಾರರು ತೀರ್ಪು ನೀಡಿದ್ದಾರೆ. ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ಕಾರ್ಯನಿರ್ವಹಿಸಲೂ ಸಹ ಬದ್ಧವಾಗಿರುವುದಾಗಿ ಪವಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಮುಖ್ಯಮಂತ್ರಿಯಾಗಬೇಕೆಂಬ ಹಂಬಲ ಇಲ್ಲ. ನಾನು ನಾಲ್ಕು ಬಾರಿ ಮಹಾರಾಷ್ಟ್ರ ಸಿಎಂ ಆಗಿದ್ದೇನೆ. ಅಲ್ಲದೆ, ಕೇಂದ್ರ ಸಚಿವನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ನನಗೆ ಅಧಿಕಾರದ ಲಾಲಸೆ ಇಲ್ಲ ಎಂದು ಪವಾರ್ ಸ್ಪಷ್ಟಪಡಿಸಿದರು.
ಈ ಮೂಲಕ ಬಿಜೆಪಿ ಮತ್ತು ಶಿವಸೇನೆ ಸರ್ಕಾರ ರಚನೆಗೆ ಎದುರಾಗಿದ್ದ ಎನ್ಸಿಪಿ ತಡೆಗೋಡೆಯನ್ನು ಅವರು ತೆರವುಗೊಳಿಸಿದಂತಾಗಿದೆ. ಹೊಸ ಸರ್ಕಾರ ರಚನೆ ವಿಷಯದಲ್ಲಿ ಕಾಂಗ್ರೆಸ್ ನಿರ್ಧಾರ ಏನು ಎಂಬುದು ತಮಗೆ ತಿಳಿದಿಲ್ಲ. ಅದು ಆ ಪಕ್ಷಕ್ಕೆ ಬಿಟ್ಟ ವಿಷಯ ಎಂದು ಮಹಾರಾಷ್ಟ್ರದ ಪ್ರಬಲ ರಾಜಕಾರಣಿ ಹೇಳಿದರು.
ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ನಡುವೆ ಮಾತುಕತೆ ನಡೆದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಹುಶಃ ಹೆದ್ದಾರಿಗಳ ವಿಷಯ ಕುರಿತು ಚರ್ಚಿಸಲು ಅವರು ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆಯೇ ಹೊರತು ಬೇರೆ ಉದ್ದೇಶ ಎಂದು ಶರದ್ಪವಾರ್ ತಿಳಿಸಿದರು.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಶಿವಸೇನೆ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಪವಾರ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿ ಚರ್ಚಿಸಿದ್ದರು. ಶರದ್ ಪವಾರ್ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಸಿಎಂ ಸ್ಥಾನ ಮತ್ತು ಅಧಿಕಾರ ಹಂಚಿಕೆ ವಿಷಯದಲ್ಲಿ ಬಿಜೆಪಿ ಜತೆ ಯಾವುದೇ ರಾಜಿ ಸಂಧಾನಕ್ಕೆ ತಮ್ಮ ಪಕ್ಷ ಸಿದ್ಧವಿಲ್ಲ.
ಅಧಿಕಾರವನ್ನು ಸಮನಾಗಿ ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಲಿಖಿತ ಭರವಸೆ ನೀಡದ ಹೊರತು ಆ ಪಕ್ಷದೊಂದಿಗೆ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಗೂ ಮುನ್ನ ಬಿಜೆಪಿ-ಶಿವಸೇನೆ ನಡುವೆ ಅಧಿಕಾರ ಹಂಚಿಕೆಗೆ ಒಮ್ಮತದ ಒಪ್ಪಂದವಾಗಿದೆ.
ಆದರೆ, ತಾವೇ ಐದು ವರ್ಷ ಮುಖ್ಯಮಂತ್ರಿಯಾಗಬೇಕೆಂದು ದೇವೇಂದ್ರ ಫಡ್ನವೀಸ್ ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ರಾವತ್ ಹೇಳಿದರು. ಶಿವಸೇನೆ ಜತೆ ಮೈತ್ರಿಯಿಂದ ಈಗ ಎನ್ಸಿಪಿ ದೂರ ಸರಿದಿರುವುದರಿಂದ ಮುಂದಿನ ಬೆಳವಣಿಗೆ ಕುತೂಹಲ ಕೆರಳಿಸಿದೆ.