ಕಾಚಿಕೋಡ್,ಸೆ.17- ದೇಶಾದ್ಯಂತ ಆತಂಕ ಮೂಡಿಸಿದ ಕೇರಳದ ನಿಫಾ ವೈರಸ್ ಅಬ್ಬರ ತಗ್ಗಿದ್ದು, ಹೊಸ ಯಾವ ಪ್ರಕರಣವೂ ಪತ್ತೆಯಾಗಿಲ್ಲ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇಂದು ಸುದ್ದಿಗಾರರೊಂದಿಗೆ ಮಾಹಿತಿ ನೀಡಿ, 42 ಮಾದರಿಗಳಲ್ಲಿ ಫಲಿತಾಂಶ ನಕಾರಾತ್ಮಕವಾಗಿ ಬಂದಿದೆ. ಈ ಮೊದಲು ಸೋಂಕಿತರ ಜೊತೆ ಆಪ್ತ ಸಂಪರ್ಕ ಹೊಂದಿದವರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವುಗಳಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದಿದ್ದಾರೆ.
ಮತ್ತಷ್ಟು ಮಾದರಿಗಳ ಫಲಿತಾಂಶ ನಿರೀಕ್ಷಿಸಲಾಗಿದೆ. ಆದಾಗ್ಯೂ ಜಾಗ್ರತೆ ಮತ್ತು ನಿರಂತರ ನಿಗಾವಣೆಯನ್ನು ಮುಂದುವರೆಸಲಾಗಿದೆ. ಸೋಂಕಿತ ಸಂಪರ್ಕದಲ್ಲಿದ್ದವರನ್ನು 21 ದಿನಗಳ ಕಾಲ ಪ್ರತ್ಯೇಕ ವಾಸದಲ್ಲಿರಿಸಲಾಗುವುದು. 42 ದಿನಗಳವರೆಗೂ ನಿಗಾ ವಹಿಸಲಾಗುವುದು. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲು ಪೊಲೀಸರ ನೆರವು ಪಡೆಯುತ್ತಿರುವುದಾಗಿ ಹೇಳಿದರು.
2018 ರಲ್ಲಿ ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಕೇಂದ್ರದ ತಂಡ ಸಂಬಂಧಪಟ್ಟ ಪ್ರದೇಶಗಳ ಭೌಗೋಳವನ್ನು ಅಧ್ಯಯನ ನಡೆಸಿದೆ. ಪೂನಾದ ರಾಷ್ಟ್ರೀಯ ವೈರಾಣು ಸಂಸ್ಥೆ, ರಾಷ್ಟ್ರೀಯ ವೈದ್ಯಕೀಯ ಪರಿಷತ್ ಜಿಲ್ಲೆಯಲ್ಲಿ ಕ್ಷೇತ್ರ ಸಮೀಕ್ಷೆಗಳನ್ನು ನಡೆಸಿವೆ. ವೈರಾಣುವಿನ ತಳಿ ಅಧ್ಯಯನವನ್ನು ನಡೆಸಲಾಗುತ್ತಿದೆ. ಇದೇ ವೇಳೆ ಬಾವುಲಿಗಳ ಸಮೀಕ್ಷೆಯೂ ನಡೆದಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 6 ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದರೆ, ನಾಲ್ವರು ಸಕ್ರಿಯ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಐಸಿಎಂಆರ್ ಸೋಂಕು ಪೀಡಿತ ಕಾಚಿಕೋಡ್ ಅಷ್ಟೆ ಅಲ್ಲದೆ ರಾಜ್ಯಾದ್ಯಂತ ಅಧ್ಯಯನ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
Nipahcases, #Kerala, #HealthMinister, #VeenaGeorge,