ಬೆಂಗಳೂರು,ಜ.29- ರಾಜ್ಯದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂ ರದ್ದು, ಶಾಲೆಗಳನ್ನು ಸೋಮವಾರದಿಂದ ಪುನರಾರಂಭಿಸುವುದು ಹಾಗೂ ಹಾಲಿ ಇರುವ ಕೆಲ ನಿಯಮಗಳನ್ನು ಸಡಿಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬಿಬಿಎಂಪಿ ಅಧಿಕಾರಿಗಳ ಜೊತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್ ಅವರು, ನೈಟ್ ಕಫ್ರ್ಯೂವನ್ನು ರದ್ದುಗೊಳಿಸಿ, ಶಾಲೆಗಳನ್ನು ಪುನಾರಂಭಿಸಲಾಗುವುದು ಎಂದರು.
ಹೋಟೆಲ್ ಉದ್ಯಮ, ಮದ್ಯ ಮಾರಾಟ, ಬಾರ್ ಅಂಡ್ ರೆಸ್ಟೋರೆಂಟ್‍ಗಳೀಗೆ ಇದ್ದ ಶೇ.50ರಷ್ಟು ಮಿತಿಯನ್ನು ಕೂಡ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದರು. ದೇವಾಲಯಗಳಲ್ಲಿ ಪೂಜೆ ಮತ್ತಿತರ ಧಾರ್ಮಿಕ ಚಟುವಟಿಕೆಗಳಿಗೆ ವಿಸಿದ್ದ ನಿರ್ಬಂಧಗಳನ್ನು ಕೂಡ ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಎಲ್ಲ ಚಟುವಟಿಕೆಗಳು ಮಾರ್ಗಸೂಚಿಗಳ ಅನ್ವಯ ನಡೆಯಬೇಕು ಎಂದು ಹೇಳಿದರು.
ಆದರೆ ಸಿನಿಮಾ ಮಂದಿರ, ಸ್ವಿಮಿಂಗ್‍ಪೂಲ್, ಮದುವೆ ಸಮಾರಂಭಗಳಿಗೆ ಯಥಾ ರೀತಿಯಲ್ಲಿ ನಿಯಮಗಳು ಮುಂದುವರೆಯಲಿವೆ ಎಂದರು. ಸಭೆ-ಸಮಾರಂಭ, ಪ್ರತಿಭಟನೆ, ರ್ಯಾಲಿಗಳಿಗೆ ಅವಕಾಶವಿಲ್ಲ. ಹೆಚ್ಚು ಜನ ಸೇರುವ ಹಾಗಿಲ್ಲ. ಇಂಥ ಕಾರ್ಯಕ್ರಮಗಳಿಗೆ ಹಿಂದಿನಂತೆ ನಿಯಮಗಳು ಅನ್ವಯವಾಗಲಿದೆ ಎಂದು ಅಶೋಕ್ ಹೇಳಿದರು.
ಕಳೆದ ಬಾರಿ ನಡೆದ ಸಭೆಯಲ್ಲಿ ತಜ್ಞರ ವರದಿ ಆಧರಿಸಿ ಬೆಂಗಳೂರಲ್ಲಿ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದರು. ಇದೀಗ ತಜ್ಞರು ಭೌತಿಕ ತರಗತಿ ಆರಂಭಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಶಾಲೆ ಪುನರಾರಂಭದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಶನಿವಾರ ಮತ್ತು ಭಾನುವಾರ ವಿಧಿಸಿದ್ದ ವಾರಾಂತ್ಯದ ಲಾಕ್‍ಡೌನ್‍ನ್ನು ಕಳೆದವಾರವಷ್ಟೇ ತೆಗೆದು ಹಾಕಲಾಗಿತ್ತು. ಈಗ ರಾತ್ರಿ 10ರಿಂದ ಮುಂಜಾನೆ 5ರವರೆಗೆ ವಿಸಲಾಗಿರುವ ನೈಟ್ ಕಫ್ರ್ಯೂ ಮತ್ತು ಕೆಲವು ನಿಬಂಧನೆಗಳು ಫೆಬ್ರವರಿ 1ರಿಂದ ಅನ್ವಯವಾಗುವಂತೆ ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ 3ನೇ ಅಲೆಯಲ್ಲಿ ಈ ಸೋಂಕು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿಲ್ಲ. ಜೊತೆಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಸಾಮಾನ್ಯ ಬೆಡ್, ಐಸಿಯು , ಆಕ್ಸಿಜನ್ ಕೊರತೆ ಎದುರಾಗಿಲ್ಲ.
ನಿನ್ನೆ ರಾಜ್ಯದಲ್ಲಿ 31 ಸಾವಿರಕ್ಕೂ ಅಧಿಕ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡರೂ ಆಸ್ಪತ್ರೆಯಿಂದ ಬಿಡುಗಡೆಯಾದವರು 71 ಸಾವಿರಕ್ಕೂ ಅಧಿಕ. ಹೀಗೆ ದಿನದಿಂದ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಸರ್ಕಾರವು ನಿಯಮಗಳನ್ನು ಸಡಿಲಿಕೆ ಮಾಡಲು ಅಭ್ಯಂತರವಿಲ್ಲ ಎಂದು ತಜ್ಞರು ಕೂಡ ಸಲಹೆ ಮಾಡಿದ್ದರು.
ಕಳೆದೆರಡು ಕೊರೋನಾ ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆಯ ತೀವ್ರತೆ ಅಷ್ಟೊಂದು ಇಲ್ಲ, ಸೋಂಕಿತರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ವೀಕೆಂಡ್ ಕಫ್ರ್ಯೂ ರದ್ದುಪಡಿಸಿದ್ದ ಸರ್ಕಾರ ಇದೀಗ ಫೆಬ್ರವರಿ 1ರಿಂದ ಮತ್ತಷ್ಟು ನಿರ್ಬಂಧ ಸಡಿಲಿಕೆ ಮಾಡಿದೆ. ಕೊರೋನಾ ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ಜನವರಿ ಆರಂಭದಿಂದ ಬೆಂಗಳೂರಿನಲ್ಲಿ 9ನೇ ತರಗತಿಯವರೆಗೆ ಶಾಲೆಗಳಿಗೆ ರಜೆ ನೀಡಿ ಆನ್‍ಲೈನ್‍ನಲ್ಲಿ ತರಗತಿ ಮುಂದುವರಿಸುವಂತೆ ಆದೇಶ ಹೊರಡಿಸಲಾಗಿತ್ತು. ಈಗ ತರಗತಿಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಾಗಿದೆ.
