ನವದೆಹಲಿ,ಜ.17- ಯಾವುದೇ ವ್ಯಕ್ತಿಗೆ ಒತ್ತಾಯ ಪೂರ್ವಕವಾಗಿ ಕೋವಿಡ್ ಲಸಿಕೆ ಹಾಕಲಾಗುತ್ತಿಲ್ಲ. ಲಸಿಕೆ ಪಡೆಯುವ ವ್ಯಕ್ತಿಯ ಪೂರ್ವಾನುಮತಿ ಇಲ್ಲದೆ ಲಸಿಕೆ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಸ್ಪಷ್ಟನೆ ನೀಡಿದೆ.
ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ. ಪ್ರಸ್ತುತ ನಡೆಯುತ್ತಿರುವ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಎಲ್ಲಾ ನಾಗರೀಕರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು, ಸಲಹೆ ಮತ್ತು ಸಂವಹನ ನಡೆಸಲಾಗಿದೆ ಎಂದು ಹೇಳಿದೆ.
ಆದರೆ, ಯಾವುದೇ ವ್ಯಕ್ತಿಗೆ ಒತ್ತಾಯವಾಗಿ ಲಸಿಕೆ ನೀಡುತ್ತಿಲ್ಲ. ಅವರ ಅನುಮತಿ ಪಡೆದು ಲಸಿಕೆ ನೀಡುತ್ತಿದ್ದೇವೆ ಎಂದು ಇಂದು ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಅಫಿಡೆವಿಟ್‍ನಲ್ಲಿ ತಿಳಿಸಲಾಗಿದೆ.
ವಿಶೇಷ ಚೇತನರ ಮನೆ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡುತ್ತಿರುವ ಬಗ್ಗೆ ಸ್ವಯಂ ಸೇವಾ ಸಂಸ್ಥೆ ಎವರೋ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಫಿಡೆವಿಟ್‍ನಲ್ಲಿ ಈ ಮಾಹಿತಿ ನೀಡಿದೆ.
