ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರಲು ಸಮಸ್ಯೆ : ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ

Social Share

ವಿಶ್ವಸಂಸ್ಥೆ,ಮಾ.8- ಉಕ್ರೇನ್‍ನ ಸುಮಿಯಲ್ಲಿ ಸಿಲುಕಿರುವ ನಮ್ಮ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಭಾರೀ ಸಮಸ್ಯೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಉಕ್ರೇನ್-ರಷ್ಯಾ ಯುದ್ಧ ಕುರಿತು ವಿಶ್ವಸಂಸ್ಥೆಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಎರಡೂ ದೇಶದವರ ಮನವೊಲಿಸಲು ಉತ್ತಮ ಪ್ರಯತ್ನಗಳ ಹೊರತಾಗಿಯೂ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ರಚಿಸಲಾಗಲಿಲ್ಲ ಎಂದು ಹೇಳಿದ್ದಾರೆ.
ಯುದ್ಧದಿಂದ ನಲುಗಿರುವ ಉಕ್ರೇನ್‍ನಲ್ಲಿ ಸಿಲುಕಿರುವ ಅಮಾಯಕ ನಾಗರಿಕರನ್ನು ಸುರಕ್ಷಿತವಾಗಿ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲು ಭಾರತ ಬಯಸುತ್ತದೆ. ಸುಮಿಯಲ್ಲಿ ಸಿಲುಕಿರುವ ನಮ್ಮ ವಿದ್ಯಾರ್ಥಿಗಳನ್ನು ಕರೆತರಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೆ, ಪರಿಸ್ಥಿತಿ ಯಮರೂಪಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಉಕ್ರೇನ್‍ನಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇತರ ದೇಶಗಳ ನಾಗರಿಕರನ್ನೂ ಪಾರು ಮಾಡಲು ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಉಕ್ರೇನ್ ಮತ್ತು ಅದರ ನೆರೆಯ ದೇಶಗಳಿಗೆ ಆಹಾರ, ಔಷಧ, ನೀರು ಸೇರಿದಂತೆ ಇತರೆ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಆದರೆ ನಮ್ಮವರನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೂಡಲೇ ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸಿ ಅಮಾಯಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು ಎಂದು ಟಿ.ಎಸ್.ತಿರುಮೂರ್ತಿ ಮನವಿ ಮಾಡಿದ್ದಾರೆ. ಸುಮಾರು 600 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಸಿಲುಕಿದ್ದು, ಹೊರ ಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ನಡುವೆ ಭಾರತದಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ಸಹಕಾರ ನೀಡುವ ಭರವಸೆ ನೀಡಿದೆ.
ಇಂದು ಮಧ್ಯಾಹ್ನ ಉಕ್ರೇನ್‍ನ ಈಶಾನ್ಯ ಭಾಗದ ಸುಮಿ ನಗರದಲ್ಲಿ ಕದನ ವಿರಾಮ ಘೋಷಿಸಲಾಗುವುದು ಎಂದು ತಿಳಿಸಿದೆ. ಅಲ್ಲಿಂದ ತುರ್ತಾಗಿ ಭಾರತೀಯರನ್ನು ನೆರೆಯ ಪೋಲೆಂಡ್ ಅಥವಾ ಸ್ಲೊವಾಕಿಯಾಗೆ ಸ್ಥಳಾಂತರಿಸಲು ಭಾರೀ ಕಸರತ್ತು ನಡೆಸಬೇಕಾಗಿದೆ. ಭಾರೀ ಸ್ಫೋಟ :ಉಕ್ರೇನ್‍ನ ಹಲವು ಭಾಗಗಳಲ್ಲಿ ರಷ್ಯಾಕ್ಷಿಪಣಿ ಹಾಗೂ ಬಾಂಬ್ ದಾಳಿ ಮುಂದುವರೆಸಿದ್ದು, ಹಲವು ಅಪಾರ್ಟ್‍ಮೆಂಟ್‍ಗಳು ನೆಲಕಚ್ಚಿವೆ. ಬಂಕರ್‍ಗಳಲ್ಲಿ ಆಶ್ರಯ ಪಡೆದಿರುವ ನಾಗರಿಕರು ಜೀವ ಭಯದಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವರು ಧೈರ್ಯ ಮಾಡಿ ಹೊರಗೆ ಬಂದು ಸುರಕ್ಷಿತ ಸ್ಥಳಗಳತ್ತ ನಡೆದುಕೊಂಡೇ ಹೋಗುತ್ತಿದ್ದಾರೆ. ಯಾರಿಗೂ ಯಾರಿಲ್ಲ ಎಂಬ ಪರಿಸ್ಥಿತಿ ಕಾಡುತ್ತಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಹಲವರು ಏಕಾಂಗಿಯಾಗಿ ಗಡಿ ದಾಟುತ್ತಿರುವ ದೃಶ್ಯಗಳು ಮನಕಲಕುವಂತಿದೆ.

Articles You Might Like

Share This Article