ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ : 83.79 ಲಕ್ಷ ಮೌಲ್ಯದ ಚಿನ್ನ,ಬೆಳ್ಳಿ, ವಾಹನಗಳ ವಶ

Social Share

ಬೆಂಗಳೂರು,ನ.18- ಉತ್ತರ ವಿಭಾಗದ ಸೋಲದೇವನಹಳ್ಳಿ ಮತ್ತು ರಾಜಗೋಪಾಲನಗರ ಠಾಣೆ ಪೊಲೀಸರು ಕನ್ನಗಳವು, ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಿ ನಗದು ಸೇರಿದಂತೆ 83.79 ಲಕ್ಷ ಮೌಲ್ಯದ 1259 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಸಾಮಗ್ರಿಗಳು ಹಾಗೂ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ.

ಸೋಲದೇವನಹಳ್ಳಿ ಠಾಣೆ ಸರಹದ್ದಿನ ಹೆಸರುಘಟ್ಟದಲ್ಲಿ ಕಳೆದ ಅಕ್ಟೋಬರ್ 4ರಂದು ಮನೆಯೊಂದರ ಕಿಟಕಿ ಸರಳನ್ನು ಕತ್ತರಿಸಿ ಒಳನುಗ್ಗಿ 61.45 ಲಕ್ಷ ಮೌಲ್ಯದ 829ಗ್ರಾಂ ಚಿನ್ನಾಭರಣ, 250 ಗ್ರಾಂ ತೂಕದ ಬೆಳ್ಳಿ ಲಕ್ಷ್ಮಿ ವಿಗ್ರಹ ಹಾಗೂ ನಗದನ್ನು ಕಳವು ಮಾಡಿ ಅದರಿಂದ ಮಹೇಂದ್ರ ಥಾರ್ ಕಾರನ್ನು ಕೂಡ ಆರೋಪಿಗಳು ಖರೀದಿಸಿದ್ದರು.

ಇದಲ್ಲದೆ, ಕಳ್ಳತನಕ್ಕಾಗಿ ಬಳಸಿದ್ದ ಒಂದು ಕಾರು, ಎರಡು ದ್ವಿಚಕ್ರ ವಾಹನ, ಎರಡು ಮೊಬೈಲ್ ಫೋನ್, ಒಂದು ಜತೆ ಹ್ಯಾಂಡ್ ಗ್ಲೌಸ್, ಒಂದು ಆ್ಯಕ್ಸಲ್ ಬ್ಲೇಡ್, ಒಂದು ಹೈಡ್ರೋಲಿಕ್ ಸ್ಟೀಲ್ ಕಟ್ಟರ್, ಎರಡು ಕಬ್ಬಿಣದ ಉಳಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತೆ-ಅಳಿಯ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಂಧಿತರನ್ನು ಮಹದೇವಮ್ಮ ಹಾಗೂ ಅವರ ಅಳಿಯ ವೆಂಕಟೇಶ್, ಅರ್ಜುನ್, ರಘು ಮತ್ತು ಗಣೇಶ ಬಂಧಿತ ಆರೋಪಿಗಳು.

ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರು ನಾಪತ್ತೆ : ಚಿಲುಮೆ ಕೈವಾಡ ಶಂಕೆ

ವೆಂಕಟೇಶ್, ಅರ್ಜುನ್, ರಘು ಕಳ್ಳತನ ಮಾಡಿಕೊಂಡು ಬರುತ್ತಿದ್ದ ಚಿನ್ನಾಭರಣಗಳನ್ನು ಮಹದೇವಮ್ಮ ಮತ್ತು ಗಣೇಶ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಬಂಧನದಿಂದ ರಾಜಾನು ಕುಂಟೆ, ಕೊಡಿಗೇಹಳ್ಳಿ, ಯಲಹಂಕ ನ್ಯೂ ಟೌನ್, ಕೆಆರ್ ಪುರ ಹಾಗೂ ಸೋಲದೇವನಹಳ್ಳಿಯಲ್ಲಿ ನಡೆದ 12ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ.

ಪ್ರಮುಖ ಆರೋಪಿ ತುಮಕೂರಿನವನಾಗಿದ್ದು, ದುಶ್ಚಟ ಬೆಳೆಸಿಕೊಂಡು ವಿಲಾಸಿ ಜೀವನ ನಡೆಸುವ ಸಲುವಾಗಿ ತನ್ನ ಸಹಚರರನ್ನು ಬಳಸಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಈತ ಕಳವು ಮಾಡಿ ತರುತ್ತಿದ್ದ ಚಿನ್ನಾಭರಣ ಹಾಗೂ ವಸ್ತುಗಳನ್ನು ಮಾವ ವಿಲೇವಾರಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಆಂಧ್ರ ಹಾಗೂ ತಮಿಳುನಾಡು ಮೂಲದವರೂ ಇದ್ದು, ಹಲವು ಖಾಸಗಿ ಕಂಪೆನಿ ಹಾಗೂ ಚಿನ್ನ-ಬೆಳ್ಳಿ ವ್ಯಾಪಾರಸ್ಥರು ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಗೋಪಾಲನಗರ: ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕನ್ನಗಳವು ಹಾಗೂ ಮನೆಗಳವು ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 14.5 ಲಕ್ಷ ರೂ. ಮೌಲ್ಯದ 280 ಗ್ರಾಂ ಚಿನ್ನಾಭರಣ ಹಾಗೂ 300 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ.1ರಿಂದಲೇ ಪೂರ್ವಾನ್ವಯವಾಗುವಂತೆ ಮೀಸಲಾತಿ ಹೆಚ್ಚಳ ಜಾರಿ

ಕಳೆದ ಅಕ್ಟೋಬರ್ 31ರಂದು ಹೆಗ್ಗನಹಳ್ಳಿ ಕ್ರಾಸ್‍ನಲ್ಲಿ ದಂಪತಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದಾಗ ಚೋರ ಬೀಗ ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕನ್ನಗಳವು ಹಾಗೂ ಮನೆಗಳವು ಪ್ರಕರಣಗಳು ಪತ್ತೆಯಾಗಿವೆ.

ರಾಜಗೋಪಾಲನಗರ ಠಾಣೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜತೆಗೆ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ, ಒಂದು ಕಬ್ಬಿಣದ ರಾಡನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ನಾಯಕರನ್ನು ಕರೆತಂದು ಸಾಲು ಸಾಲು ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ

ಮತ್ತೊಂದು ಪ್ರಕರಣದಲ್ಲಿ ಗಣಪತಿನಗರದಲ್ಲಿ ಮನೆಯೊಡತಿ ಮನೆಯ ಮುಂಬಾಗಿಲಿಗೆ ಚಿಲಕ ಹಾಕಿಕೊಂಡು ಮನೆಯ ಟೆರೇಸ್ ಮೇಲೆ ಹೋಗಿ ಬಟ್ಟೆಯನ್ನು ಒಣಗಿಸಲು ಹಾಕಿ ಬರುವಷ್ಟರಲ್ಲಿ ಮನೆಗೆ ನುಗ್ಗಿದ ಕಳ್ಳ ಚಿನ್ನದ ಸರ, ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ 2.84 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನಾಭರಣ, 49 ಸಾವಿರ ರೂ. ನಗದು, 300 ಗ್ರಾಂ ಬೆಳ್ಳಿ ಆಭರಣಗಳು, ಮೊಬೈಲ್ ಫೋನ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಈತನ ಬಂಧನದಿಂದ ಒಟ್ಟು ಆರು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

North, Division, Police, Seized, gold, silver, vehicles,

Articles You Might Like

Share This Article