ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ..! ಅಪಾಯದ ಮಟ್ಟ ಮೀರಿದ ನದಿಗಳು..!

Spread the love

ಬೆಳಗಾವಿ/ಬಾಗಲಕೋಟೆ, ಸೆ.8- ಉತ್ತರ ಕರ್ನಾಟಕದಲ್ಲಿ ಪ್ರವಾಹದ ಆರ್ಭಟ ಮುಂದುವರಿದಿದ್ದು, ಮಲಪ್ರಭ, ಘಟಪ್ರಭ, ವೇದ್‍ಗಂಗಾ, ದೂದ್‍ಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಲೆನಾಡಿನ ಶಿವಮೊಗ್ಗದಲ್ಲಿ ಮಳೆಗೆ ಮನೆ ಕುಸಿದು ಓರ್ವ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸ ಸಿದ್ದಾಪುರದಲ್ಲಿ ಮನೆ ಛಾವಣಿ ಕುಸಿದು ಗುರು (40) ಎಂಬುವವರು ಸಾವನ್ನಪ್ಪಿ ಮೂರು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ 30 ಗ್ರಾಮಗಳು ಮುಳುಗಡೆಯಾಗಿವೆ. ಮಲಪ್ರಭ ನದಿ ನೀರು ಭಾರೀ ಪ್ರಮಾಣದಲ್ಲಿ ತುಂಬಿ ಹರಿಯುತ್ತಿರುವುದರಿಂದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ.

ರಾಮದುರ್ಗ ತಾಲ್ಲೂಕಿನ ಕೊಣ್ಣೂರು-ಬೂದಿಹಾಳಕ್ಕೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗುತ್ತಿದ್ದು, ಪ್ರದೇಶವೆಲ್ಲ ಜಲಾವೃತವಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ ನೀರು ಬಿಡುಗಡೆಯಾಗುತ್ತಿದ್ದು, ಸಂಜೆ ವೇಳೆಗೆ ಒಂದು ಲಕ್ಷ ಕ್ಯೂಸೆಕ್‍ನಷ್ಟು ನೀರು ಬಿಡುಗಡೆಯಾಗುವ ಸಾಧ್ಯತೆಯಿದ್ದು, ಕೃಷ್ಣಾ ನದಿ ಪಾತ್ರದ ಜನರು ಮತ್ತಷ್ಟು ಸಂಕಷ್ಟಕ್ಕೀಡಾಗುವ ಸಂಭವವಿದೆ.ಹುಬ್ಬಳ್ಳಿ, ಧಾರವಾಡ, ರಾಯಚೂರು, ವಿಜಯಪುರ, ಗುಲ್ಬರ್ಗಾ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳು ಈಗಾಗಲೇ ಮಳೆ, ಭೀಕರ ನೆರೆಯಿಂದ ತತ್ತರಿಸಿ ಹೋಗಿದ್ದವು.

ಲಕ್ಷಾಂತರ ಜನ ನಿರಾಶ್ರಿತರಾಗಿದ್ದರು. ನೂರಾರು ಮನೆಗಳು ಕುಸಿದು ಹೋಗಿದ್ದವು. ಸಂತ್ರಸ್ತರು ಪರಿಹಾರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲೇ ಮತ್ತೆ ಪ್ರವಾಹ ಎದುರಾಗಿದೆ.ಗೋಕಾಕ್, ಅಥಣಿ ತಾಲ್ಲೂಕಿನ ಹಲವು ಗ್ರಾಮಗಳು ಕೂಡ ಜಲಾವೃತವಾಗಿವೆ.

ಯಾದಗಿರಿಯಲ್ಲೂ ಪ್ರವಾಹದ ಭೀತಿ ಎದುರಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಲು ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಡ್ಯಾಮ್‍ನಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದ್ದು, ನದಿಪಾತ್ರದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಲಕ್ಮಾಪುರದಲ್ಲಿ ಎಂಟು ಜನ, ಎಂಟು ಜಾನುವಾರುಗಳು ಪ್ರವಾಹದ ಸುಳಿಗೆ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಎನ್‍ಆರ್ ಪುರ ತಾಲ್ಲೂಕಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನ ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮೂಡಿಗೆರೆ ಸಮೀಪ ಅಂಡುಗುಳಿ ಗ್ರಾಮದಲ್ಲಿ ಗುಡ್ಡಕುಸಿತದಿಂದಾಗಿ ಸುಧೀರ್ ಎಂಬುವವರ ಕಾಫಿ ತೋಟ ಸಂಪೂರ್ಣ ನಾಶವಾಗಿದೆ.

Sri Raghav

Admin