ನೆರೆ ಪೀಡಿತ ಪ್ರದೇಶಗಳಲ್ಲಿ ಪಡಿತರ ವಿತರಿಸುವಾಗ ಯಾವುದೇ ದಾಖಲೆ ಕೇಳುವಂತಿಲ್ಲ

Spread the love

ಬೆಂಗಳೂರು,ಸೆ.9- ನೆರೆ ಪೀಡಿತಕ್ಕೊಳಗಾದ ಪ್ರದೇಶಗಳಲ್ಲಿನ ಪಡಿತರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವಾಗ ಯಾವುದೇ ದಾಖಲಾತಿಗಳನ್ನು ಕೇಳುವಂತಿಲ್ಲ ಎಂದು ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ.

ಆಹಾರ ಇಲಾಖೆಯ ಸುತ್ತೋಲೆ ಸಂಬಂಧ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಅರ್ಹ ಪಡಿತರ ಫಲಾನುಭವಿಗಳಿಂದ ಪಡಿತರಚೀಟಿ, ಆಧಾರ್ ಕಾರ್ಡ್, ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಹ ಪಡಿತರ ಫಲಾನುಭವಿಗಳಿಗೆ ಪಡಿತರ ನೀಡಲು ದಾಖಲಾತಿ ಕೇಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಈ ಸುತ್ತೋಲೆ ಹೊರಡಿಸಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿರುವ ಪಡಿತರ ಪಲಾನುಭವಿಗಳ ಮಾಹಿತಿಯನ್ನು ಆಧರಿಸಿ ಇಂಟರ್‍ನೆಟ್ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಲ್ಲಿ ಮಾತ್ರ ಆಫ್‍ಲೈನ್ ಮೂಲಕ ಮುಂದಿನ ಮೂರು ತಿಂಗಳವರೆಗೆ ಪಡಿತರ ವಿತರಣೆ ಮಾಡಬಹುದಾಗಿದೆ ಎಂದು ನಿರ್ದೇಶನ ನೀಡಲಾಗಿದೆ.

# ಆಹಾರ ಇಲಾಖೆಯ ಸೂಚನೆ ಏನು?:
ಪಡಿತರ ಪಡೆಯಲು ಬಂದವರ ಮೇಲೆ ಅನುಮಾನ ಇದ್ದರೆ ಅವರ ವಿಳಾಸ, ಹೆಸರು, ಮೊಬೈಲ್ ನಂಬರ್ ಪಡೆದು ಖಾತರಿ ಮಾಡುವುದು, ಪ್ರವಾಹದಲ್ಲಿ ಪಡಿತರ ಚೀಟಿ ಕಳೆದುಕೊಂಡವರಿಗೆ ಕೂಡಲೇ ಪಡಿತರ ಚೀಟಿ ವಿತರಿಸಬೇಕು ಎಂದು ತಿಳಿಸಿದೆ.

ಆನ್‍ಲೈನ್ ಮೂಲಕ ಪಡಿತರ ವಿತರಣೆ ಮಾಡುವ ಆಯಾ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಫಲಾನುಭವಿಗಳ ವಿವರವನ್ನು ತಿಂಗಳಾಂತ್ಯದಲ್ಲಿ ಅವರಿಗೆ ವಿತರಿಸಿರುವ ಪಡಿತರ ಪ್ರಮಾಣದ ವಿವರದೊಂದಿಗೆ ಆಹಾರ ಡಾಟಾಬೇಸ್‍ಗೆ ಅಪ್‍ಲೋಡ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿಶೇಷ ಆಂದೋಲನ ಮೂಲಕ ಎಲ್ಲ ಫಲಾನುಭವಿಗಳಿಗೆ ಅವರ ಪಡಿತರ ಚೀಟಿಗಳ ಪ್ರತಿಯನ್ನು ಮುದ್ರಿಸಿ ನೀಡಲು ಕ್ರಮ ವಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

Sri Raghav

Admin