‘ಮಹಾ’ ಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ..!

ಬೆಂಗಳೂರು,ಆ.18-ಕರ್ನಾಟಕ-ಮಹಾರಾಷ್ಟ್ರ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಕರ್ನಾಟಕ ಭಾಗದ ನದಿಗಳು ಉಕ್ಕಿ ಹರಿಯುತ್ತಿದ್ದು ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲೆಯಲ್ಲಿ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ.

ಬೆಳಗಾವಿಯ ತಾಲೂಕಿನ 15 ಗ್ರಾಮಗಳು ಜಲಾವೃತಗೊಂಡಿವೆ. ಗೋಕಾಕ್ ನಗರಕ್ಕೆ ನೀರು ನುಗ್ಗಿ ಅಂಗಡಿ, ಮಸೀದಿ, ಮಂದಿರಗಳು ಜಲಾವೃತಗೊಂಡಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ನದಿ ಪಾತ್ರದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.

ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧವಾಗಿದ್ದು; ಅಗತ್ಯ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಕಾರಿಗಳಿಗೆ ಸೂಚನೆ ನೀಡಿದೆ. ಯಾವುದೇ ಸಾವು ನೋವಿಗೂ ಆಸ್ಪದ ಕೊಡದಂತೆ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಿ ಎಂದು ತಾಕೀತು ಮಾಡಿದೆ.

ಕೃಷ್ಣ ನಡುಗಡ್ಡೆಯಲ್ಲಿ ಹತ್ತಾರು ಕುರಿಗಾಹಿಗಳು ಸಿಲುಕಿಕೊಂಡಿದ್ದು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿಬೇಕೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಈಗಾಗಲೇ ಸೂಚನೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ 13 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು ಜನ ಭಯಭೀತರಾಗುವುದು ಬೇಡ. ಸುರಕ್ಷತೆಗೆ ಅಗತ್ಯಕ್ರಮ ಸರ್ಕಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನದಿ ಪಾತ್ರದಲ್ಲಿರುವ ಗ್ರಾಮಗಳ ಸಾರ್ವಜನಿಕರು ತಮ್ಮ ಕೃಷಿ ಉಪಕರಣ ಹಾಗೂ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಬೆಳಗಾವಿ ರಾಯಭಾಗ ತಾಲೂಕಿನ ಕುಡುಚಿ ಬಳಿಯ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಘಟಪ್ರಭಾ ನದಿಯ ಪ್ರವಾಹದ ಪರಿಣಾಮ ಗೋಕಾಕ್ ನಗರದ ಹಲವೆಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ.

ರಾಮದುರ್ಗ ಸುರೇಬಾನ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ. ಸವದತ್ತಿ ತಾಲೂಕಿನ ಮನವಳ್ಳಿಯಲ್ಲಿ ಮನೆ, ಬ್ಯಾಂಕ್, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನ ನಿದ್ದೆಯಿಲ್ಲದೆ ಕಾಲ ಕಳೆಯುವಂತಾಗಿದೆ.

ರಾಯಚೂರಿನ ಪೆದ್ದಕುರಂ ಸಮೀಪ ಕೃಷ್ಣ ನದಿಯಲ್ಲಿ ನಿನ್ನೆ ಸಂಜೆ ತೆಪ್ಪ ಮುಳುಗಿ ಬಾಲಕಿ ಸೇರಿದಂತೆ ನಾಲ್ವರು ನಾಪತ್ತೆಯಾಗಿದ್ದು ಅವರ ಶೋಧ ಕಾರ್ಯ ಮುಂದುವರೆದಿದೆ.

ಗದಗ ಜಿಲ್ಲೆಯ ನರಗುಂದ ಭಾಗದ 16 ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಶರಣೆ ಗಂಗಾಬಿಕೆ ಐಕ್ಯ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೊಳ್ಳೂರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಅಲ್ಲದೆ ನದಿಪಾತ್ರದ ಹೊಲ ಗದ್ದೆಗಳು ಜಲಾವೃತವಾಗಿದ್ದು ಜನರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಯಿಂದ 1 ಲಕ್ಷಕ್ಕೂ ಅಕ ಕ್ಯೂಸೆಕ್ಸ್ ನೀರು ಹೊರ ಬಿಟ್ಟಿರುವುದರಿಂದ ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ರಸ್ತೆ, ಸೇತುವೆಗಳೆಲ್ಲ ಮುಳುಗಡೆಯಾಗಿವೆ.

ಮಲಪ್ರಭಾ, ಘಟಪ್ರಭಾ ಜಲಾಶಯದಿಂದಲೂ ಕೂಡ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವುದರಿಂದ ನದಿ ಪಾತ್ರದ ಹಳ್ಳಿಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

ಮಳೆ ಇನ್ನೂ ಮುಂದುವರೆಯುವ ಸಾಧ್ಯತೆ ಇರುವುದಲ್ಲದೆ ಜಲಾಶಯಗಳಿಂದ ನೀರು ಬಿಡುವ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಭಾಗದ ಜನ ಜೀವ ಕೈಯಲ್ಲಿ ಹಿಡಿದು ಬದುಕು ದೂಡುತ್ತಿದ್ದಾರೆ.

ಕಳೆದ ಬಾರಿ ಪ್ರವಾಹದಿಂದ ಮನೆ, ಮಠ ಕಳೆದುಕೊಂಡು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಜನತೆಗೆ ಮತ್ತೆ ನೆರೆ ಹಾವಳಿ ಕಾಡಿದ್ದು; ನದಿ ಪಾತ್ರದ ಜನರು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿರುವ ಅವರು; ಕಳೆದ ಬಾರಿ ನೆರೆ ಪರಿಹಾರ ಇನ್ನೂ ತಮ್ಮ ಕೈ ಸೇರದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅಕಾರಿಗಳು, ಸ್ಥಳೀಯ ಜನಪ್ರತಿನಿಗಳನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಕಳೆದ ಬಾರಿ ಮನೆ ಕಳೆದುಕೊಂಡ ಸಂದರ್ಭದಲ್ಲಿ ನಮಗೆ ಮನೆ ಕಟ್ಟಿಕೊಳ್ಳಲು ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಇನ್ನೂ ಯಾವುದೇ ಪರಿಹಾರ ನೀಡಿಲ್ಲ. ಶೆಡ್‍ನಲ್ಲಿ ಜೀವನ ನಡೆಸುತ್ತಿದ್ದೇವೆ. ಇದೀಗ ಮತ್ತೆ ಸ್ಥಳಾಂತರಗೊಳ್ಳಿ ಎನ್ನುತ್ತಿದ್ದೀರಿ.

ನಾವು ಜೀವ ಹೋದರು ಸರಿಯೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಬೆಳಗಾವಿ, ಬಾಗಲಕೋಟೆಯ ಹಲವು ಸಂತ್ರಸ್ಥರು ಪಟ್ಟು ಹಿಡಿದಿದ್ದಾರೆ. ಇತ್ತ ಕರಾವಳಿ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನದಲ್ಲೂ ವರುಣನ ಆರ್ಭಟ ಮುಂದುವರೆದಿದೆ.

Sri Raghav

Admin