ಅರ್ಧ ಕರ್ನಾಟಕಕ್ಕೆ ಜಲ ಕಂಟಕ, ರಾಷ್ಟ್ರೀಯ ವಿಪತ್ತು ಘೋಷಣೆಗೆ ಮನವಿ

Spread the love

ಬೆಂಗಳೂರು,ಅ.16- ಮಹಾಮಳೆ ಯಿಂದ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿರುವ ರಾಜ್ಯ ಸರ್ಕಾರ ಪ್ರಸ್ತುತ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾರೀ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. 11 ಸಾವಿರ ಮನೆಗಳು ಬಿದ್ದಿವೆ. 360 ಕೆರೆಗಳು ಒಡೆದಿವೆ. 3158 ಕಟ್ಟಡಗಳಿಗೆ ಹಾನಿಯಾಗಿದೆ. 1268 ಸೇತುವೆಗಳು ಕೊಚ್ಚಿ ಹೋಗಿವೆ. ಅಪಾರ ಪ್ರಮಾಣದಲ್ಲಿ ರಸ್ತೆಗಳು ಹಾಳಾಗಿವೆ. ಲಕ್ಷಾಂತರ ಎಕರೆ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ.

ಒಟ್ಟಾರೆ ನಷ್ಟದ ಸಮೀಕ್ಷೆ ನಡೆಸಿ ವಾರದ ಒಳಗಾಗಿ ಸಮಗ್ರ ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತ್ರಸ್ತ ಜಿಲ್ಲೆಗಳ ಜಿಲ್ಲಾಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಪದೇ ಪದೇ ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಕಷ್ಟ-ನಷ್ಟ ಉಂಟಾಗಿದೆ. ಜನ-ಜಾನುವಾರುಗಳ ಪ್ರಾಣ ಹಾನಿ, ಆಸ್ತಿ ನಷ್ಟ, ಬೆಳೆ ನಷ್ಟ, ಮೂಲಸೌಲಭ್ಯಗಳ ಕೊರತೆಯಿಂದ ಕರ್ನಾಟಕ ತತ್ತರಿಸುವ ಸ್ಥಿತಿ ಬಂದಿದೆ.

ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ಕೊರೊನಾದಿಂದಾಗಿ ಆರ್ಥಿಕ ಸಮಸ್ಯೆ ಕೂಡ ಎದುರಾಗಿದೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕಲ್ಯಾಣ ಕರ್ನಾಟಕದ ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಮುಂಬೈ ಕರ್ನಾಟಕದ ಬೀದರ್, ಬೆಳಗಾವಿ ಸೇರಿದಂತೆ 15 ಜಿಲ್ಲೆಗಳು ಅಕ್ಷರಶಃ ಕೆರೆಯಂತಾಗಿವೆ.

ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ಕಷ್ಟದಲ್ಲಿರುವವರ ನೆರವಿಗೆ ಧಾವಿಸಿದೆ. ಕೇಂದ್ರ ಸರ್ಕಾರ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಹೆಚ್ಚಿನ ನೆರವು ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ಇಂದು ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಲ್ಯಾಣ ಕರ್ನಾಟಕ ಭಾಗದ ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಕಳೆದ ಆಗಸ್ಟ್‍ನಲ್ಲೂ ಮಳೆ ಸುರಿದು ಸಾಕಷ್ಟು ಹಾನಿಯಾಗಿತ್ತು. ರಾಜ್ಯ ಸರ್ಕಾರ ಸಂತ್ರಸ್ತರ ಜತೆಗೆ ನಿಲ್ಲಲಿದೆ. ಕೇಂದ್ರ ಸರ್ಕಾರದ ನೆರವು ಕಾಯದೆ ಕರ್ನಾಟಕ ಸರ್ಕಾರ ತನ್ನ ಬೊಕ್ಕಸದಿಂದಲೇ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಜಿಲ್ಲಾಕಾರಿಗಳ ವೈಯಕ್ತಿಕ ಖಾತೆಯಲ್ಲಿ ಹಣವಿದ್ದು, ಆರ್ಥಿಕ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅತಿವೃಷ್ಟಿ ಯಿಂದ ಸಂಕಷ್ಟಕ್ಕೀಡಾದ ಜನರಿಗೆ ಸ್ಪಂದಿಸದ ಸೋಮಾರಿ ಅಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಲಾಜಿಲ್ಲದೆ ಎತ್ತಂಗಡಿ ಮಾಡುವುದೂ ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಕಳೆದ ವರ್ಷದ ಮಳೆಗಾಲದಲ್ಲಿ ಉಂಟಾದ ಬೆಳೆ ಹಾನಿಗೆ ವಾರದ ಒಳಗಾಗಿ ಪರಿಹಾರ ಪಾವತಿಸಲಾಗುವುದು. ರೈತರ ಖಾತೆಗಳಿಗೆ ನೇರವಾಗಿ ಆರ್‍ಟಿಜಿಎಸ್ ಮೂಲಕ ಪರಿಹಾರದ ಮೊತ್ತವನ್ನು ಜಮಾ ಮಾಡುವಂತೆ ವಿಮಾ ಕಂಪೆನಿಗಳಿಗೆ ಮನವಿ ಮಾಡಿರುವುದಾಗಿ ಅಶೋಕ್ ಹೇಳಿದರು.

Facebook Comments

Sri Raghav

Admin