ನಾಳೆ ಇಡೀ ದಿನ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ : ಹೊರಟ್ಟಿ ಭರವಸೆ

Spread the love

ಬೆಳಗಾವಿ, ಡಿ.20- ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚಿಗೆ ನಾಳೆ ಬೆಳಗ್ಗೆ 10.30ರಿಂದ ದಿನಪೂರ್ತಿ ಚರ್ಚೆಗೆ ಸಮಾಯವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು. ವಿಧಾನಪರಿಷತ್‍ನಲ್ಲಿ ಸಂತಾಪ ಸೂಚನೆ ಬಳಿಕ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಮಾತನಾಡಿ, ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳನ್ನು ಚರ್ಚಿಸದಿದ್ದರೆ ಜನ ಮುಂಗೈ ಹಿಡಿದು ಕೇಳುತ್ತಾರೆ.

ಪರಿಸ್ಥಿತಿ ಮೊದಲಿನಂತೆ ಇಲ್ಲ, ಹೊರಗೆ ನಮ್ಮನ್ನು ಪ್ರಶ್ನಿಸುತ್ತಾರೆ. ಮೂರು ವರ್ಷಗಳ ನಂತರ ಬೆಳಗಾವಿಯಲ್ಲಿ ಅವೇಶನ ನಡೆಯುತ್ತಿದೆ. ಕೃಷ್ಣಾ ಮೇಲ್ದಂಡೆ, ನೀರಾವರಿ ಯೋಜನೆಗಳ ಹಾಗೂ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ. ಜನ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈ ಬಾರಿಯ ಅವೇಶನದಲ್ಲಾದರೂ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಕೈ ಮುಗಿದು ಪ್ರಾರ್ಥಿಸುವುದಾಗಿ ಹೇಳಿದರು.

ಎಂಇಎಸ್‍ನ ಪುಂಡರು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಸರ್ಕಾರ ಇದನ್ನು ತಡೆಯಲು ವಿಫಲವಾಗಿದೆ. ಇಂತಹ ಪುಂಡಾಟಿಕೆ ಕರ್ನಾಟಕದ ನೆಲದಲ್ಲಿ ನಡೆಯಬಾರದು, ಸರ್ಕಾರ ಯಾರ ಮುಲಾಜಿಗೂ ಒಳಗಾಗದೆ ಪುಂಡರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ಈ ವಿಷಯದ ಚರ್ಚೆಗೂ ಅವಕಾಶ ನೀಡಬೇಕು ಎಂದು ಅವರು ಮತ್ತೊಮ್ಮೆ ಮನವಿ ಮಾಡಿದರು.

ಆಡಳಿತ ಪಕ್ಷದ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ಅವೇಶನ ಆರಂಭವಾಗಿ ಒಂದು ವಾರ ಕಳೆದಿದೆ. ಯಾವ ಸಮಸ್ಯೆಗಳೂ ಚರ್ಚೆಯಾಗಿಲ್ಲ. ಸಚಿವರು, ಅಕಾರಿಗಳು ಬೆಂಗಳೂರಿನಿಂದ ಬಂದಿರುವುದು ಪಿಕ್‍ನಿಕ್‍ಗೆ, ಶನಿವಾರ, ಭಾನುವಾರ ಬಂತೆಂದರೆ ಗೋವಾ ಪಿಕ್‍ನಿಕ್ ಹೋಗ್ತಾರೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಈ ಭಾಗದ ಜನರ ಸಮಸ್ಯೆ ಚರ್ಚೆ ಮಾಡಿ. ಇಲ್ಲವಾದರೆ ಅವೇಶನವನ್ನು ಅನಿರ್ದಿಷ್ಠಾವಗೆ ಮುಂದೂಡಿ. ಅದೂ ಆಗದಿದ್ದರೆ ದಯವಿಟ್ಟು ಬೆಂಗಳೂರಿಗೆ ವಾಪಾಸ್ ಹೋಗಿ ಎಂದರು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ-ಭಾವ ತೊಡೆದು ಹಾಕಬೇಕು ಎಂಬ ಕಾರಣಕ್ಕೆ ಸುವರ್ಣ ಸೌಧ ನಿರ್ಮಿಸಲಾಗಿದೆ. ಇಲ್ಲಿ ಒಬ್ಬ ವ್ಯಕ್ತಿಯ ವಿಷಯವನ್ನು ಮುಂದಿಟ್ಟುಕೊಂಡು ಧರಣಿ ನಡೆಸಿ ಸಮಯ ಹಾಳು ಮಾಡಬೇಡಿ. ನಿಮ್ಮ ರಾಜಕೀಯ ವಿಷಯಗಳನ್ನು ಬೆಂಗಳೂರಿನಲ್ಲಿ ಚರ್ಚೆ ಮಾಡಿ. ಇಲ್ಲಿ ಆ ವಿಷಯ ಬೇಡ. ಈ ಭಾಗದಲ್ಲಿ ಬೆಳೆ ಹಾನಿ, ನೀರಾವರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರ ಪೈಕಿ ಸದಸ್ಯ ಎಂ.ನಾರಾಯಣಸ್ವಾಮಿ ಅವರು, ನಾವು ಪ್ರಸ್ತಾಪಿಸಿದ ವಿಷಯಗಳ ಚರ್ಚೆಗೆ ಅವಕಾಶ ನೀಡಿದರೆ ಧರಣಿ ಕೈಬಿಡುತ್ತೇವೆ ಎಂದರು. ಶ್ರೀಕಂಠೇಗೌಡ ಅವರು, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ ಎಂಬ ಕುತೂಹಲದಿಂದ ಜನ ಕಾಯುತ್ತಿದ್ದಾರೆ. ನಾವು ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಚರ್ಚೆಗೆ ನೋಟಿಸ್ ನೀಡಿದ್ದೇವೆ. ಅದಕ್ಕೆ ಇನ್ನೂ ಅವಕಾಶ ಸಿಕ್ಕಿಲ್ಲ ಎಂದರು.

ಎಂಇಎಸ್‍ನ ಪುಂಡರು ಧ್ವಜ ಸುಡುತ್ತಾರೆ. ಅದನ್ನು ಪ್ರತಿಭಟಿಸಿದವರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ. ರಾಯಣ್ಣ ಪ್ರತಿಮೆ ಧ್ವಂಸ ಮಾಡಿದವರ ವಿರುದ್ಧ ಸಾಮಾನ್ಯ ಪ್ರಕರಣಗಳು ದಾಖಲಾಗಿವೆ. ಸರ್ಕಾರವೂ ವಿಫಲವಾಗಿದೆ. ಇದರ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದರು.
ಸಿ.ಎಂ.ಇಬ್ರಾಹಿಂ ಅವರು, ಸಚಿವ ಬೈರತಿ ಬಸವರಾಜು ಅವರ ಭೂ ಕಬಳಿಕೆ ಹಗರಣದ ಚರ್ಚೆಗೆ ಅವಕಾಶ ನೀಡಿ ಮತ್ತು ಶೇ.40ರಷ್ಟು ಕಮಿಷನ್ ಭ್ರಷ್ಟಚಾರದ ಬಗ್ಗೆ ಚರ್ಚೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಸಭಾನಾಯಕ ಕೋಟಾಶ್ರೀನಿವಾಸ ಪೂಜಾರಿ ಅವರು, ನಾವು ಚರ್ಚೆಗೆ ಸಿದ್ಧವಿದ್ದೇವೆ. ಎಂಇಎಸ್‍ನ ದಬ್ಬಾಳಿಕೆ, ಗೂಂಡಾ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಕಲ್ಲು ತೂರಿದ, ಭಾವುಟ ಸುಟ್ಟವರಿಗೆ ಪೊಲೀಸರ ಲಾಠಿ ರುಚಿ ಸಿಗಲಿದೆ. ಪ್ರತಿಪಕ್ಷಗಳ ಟೀಕೆಯನ್ನು ಸ್ವೀಕರಿಸುತ್ತೇವೆ. ತಕ್ಕ ಉತ್ತರವನ್ನು ನೀಡುತ್ತೇವೆ ಎಂದರು.

ಸಚಿವ ಗೋವಿಂದ ಕಾರಜೋಳ ಅವರು, ಹಿಂದುಳಿದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಸುವರ್ಣ ಸೌಧ ಕಟ್ಟಲಾಗಿದೆ. ಆದರೆ, ಪ್ರತಿ ಅವೇಶನದಲ್ಲೂ ಪ್ರತಿಭಟನೆ, ಗಲಾಟೆಗಳಿಂದಲೇ ಮುಗಿದು ಹೋಗುತ್ತಿವೆ. ಈ ಬಾರಿಯಾದರೂ ಅಭಿವೃದ್ಧಿ ವಿಷಯಗಳು ಚರ್ಚೆಯಾಗಲಿ. ಕೃಷ್ಣ ನದಿ ಮೇಲ್ದಂಡೆ ಸೇರಿದಂತೆ ನೀರಾವರಿ ವಿಚಾರಗಳ ಚರ್ಚೆಗೂ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಸಭಾಪತಿ ಅವರು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯಾಗಬೇಕು ಎಂಬ ಆಶಯ ನನ್ನದೂ ಆಗಿದೆ. ದಯವಿಟ್ಟು ಸಹಕಾರ ಕೊಡಿ ಎಂದು ಮನವಿ ಮಾಡಿದರು.

ನಾಳೆ ಪ್ರಶ್ನೋತ್ತರದ ಬಳಿಕ 10.30ರ ನಂತರ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಭಾಗದ ಸಮಸ್ಯೆಗಳ ಚರ್ಚೆಗೆ ಸಮಯ ನಿಗದಿ ಮಾಡಲಾಗಿದೆ. ಇದಕ್ಕೆ ಸರ್ಕಾರವೂ ಸಿದ್ಧವಿರಬೇಕು ಹಾಗೂ ಪ್ರತಿಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.