ಸಿಯೋಲ್ , ಸೆ 25-ಅಮೆರಿಕ ವಿಮಾನವಾಹಕ ನೌಕೆ ಜಂಟಿ ಸೇನಾಭ್ಯಾಸಕ್ಕಾಗಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡುತ್ತಿದ್ದಂತೆ ಉತ್ತರ ಕೊರಿಯಾ ತನ್ನ ಪೂರ್ವ ಸಮುದ್ರದ ಕಡೆಗೆ ಇಂದು ಅಲ್ಪ-ಶ್ರೇಣಿಯ ಕ್ಷಿಪಣಿಯನ್ನು ಹಾರಿಸಿ ಪ್ರಚೋದಿಸಿದೆ.
ಪರಮಾಣು ದಾಳಿ ಬೆದರಿಕೆ ನೀಡಿ ಅಮೆರಿಕ ನಡೆಯನ್ನು ಕಟುವಾಗಿ ವಿರೋಧಿಸಿದೆ. ಇಂದು ಬೆಳಿಗ್ಗೆ ಪಶ್ಚಿಮ ಒಳನಾಡಿನ ಪಟ್ಟಣವಾದ ಟೇಚನ್‍ನಿಂದ ಕ್ಷಿಪಣಿಯನ್ನು ಉಡಾಯಿಸಿ ಗರಿಷ್ಠ 60 ಕಿಲೋಮೀಟರ್ ಎತ್ತರದಲ್ಲಿ 600 ಕಿಲೋಮೀಟರ್ ಸಾಗಿ ಸಮುದ್ರದಲ್ಲಿ ಇಳಿದಿದೆ. ಉತ್ತರ ಕೊರಿಯಾದಿಂದ ಗಂಭೀರ ಪ್ರಚೋದನೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಖಂಡಿಸಿದ್ದಾರೆ.
ಇದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಸುರಕ್ಷತೆಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ. ದಿನೇ ದಿನೇ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದು ಅಕ್ಕ ಪಕ್ಕದ ದೇಶಗಳಿಗೆ ಆತಂಕ ಶುರುವಾಗಿದೆ.
ಅಮೆರಿಕ-ದಕ್ಷಿಣ ಕೊರಿಯಾ ದೇಶಗಳ ಜಂಟಿ ಮಿಲಿಟರಿ ವ್ಯಾಯಾಮ ಶಕ್ತಿ ಪ್ರದರ್ಶನ ಎಂದು ಹೇಳಲಾಗುತ್ತಿದೆ. ಉತ್ತರ ಕೊರಿಯಾ ಕ್ಷಿಪಣಿ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿ , ನಮ್ಮ ಹಡಗುಗಳು ಮತ್ತು ವಿಮಾನಗಳ ಸುರಕ್ಷತೆ ಹೆಚ್ಚಿಸಿಕೊಳ್ಳಲು ಜಪಾನಿನ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಸೇನಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.