ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ, ನಾಲ್ವರು ಆರೋಪಿಗಳ ಸೆರೆ ; 13.3 ಕೆಜಿ ಗಾಂಜಾ ವಶ

Social Share

ಬೆಂಗಳೂರು,ಫೆ.13- ಉತ್ತರ ವಿಭಾಗದ ನಂದಿನಿ ಲೇಔಟ್ ಮತ್ತು ಯಶವಂತಪುರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಒಟ್ಟು 13.3 ಕೆ.ಜಿ ಗಾಂಜಾ ಮತ್ತು 2000ರೂ ನಗದು ವಶಪಡಿಸಿ ಕೊಂಡಿದ್ದಾರೆ.
ನಂದಿನಿ ಲೇಔಟ್ ಠಾಣೆ ಪೊಲೀಸರು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‍ಸೇರಿದಂತೆ ಮೂವರನ್ನು ಬಂಧಿಸಿ, ಅವರಿಂದ 10ಕೆ.ಜಿ.ಗಾಂಜಾ ವಶಕ್ಕೆ ಪಡೆದಿದ್ದಾರೆ.
ಲಕ್ಷ್ಮಿ ದೇವಿ ನಗರದ ಬ್ರಿಡ್ಜ್ ಕೆಳಗೆ ಮೂವರು ಅಪರಿಚಿತರು ಕೈಯಲ್ಲಿ ಕವರ್ ಹಿಡಿದು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನಂದಿನಿ ಲೇಔಟ್ ಠಾಣೆ ಅಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಒರಿಸ್ಸಾ ಮೂಲದ ಆರೋಪಿ ಬೆಂಗಳೂರಿನ ಕಂಪನಿ ಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಆತ ಸ್ವಂತ ಊರು ಒರಿಸ್ಸಾಗೆ ಹೋದಾಗ ಅತಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ವಾಸನೆ ಬಾರದಂತೆ ಪ್ಯಾಕ್ ಮಾಡಿಕೊಂಡು, ಲಗೇಜ್ ಬ್ಯಾಗ್ ಗಳಲ್ಲೆ ಕೆಳಗೆ ಇಟ್ಟು ಮೇಲೆ ಬಟ್ಟೆ ಜೋಡಿಸಿ ರೈಲಿನಲ್ಲಿ ಬೆಂಗಳೂರಿಗೆ ತಂದು ಹೊಸದಾಗಿ ನಿರ್ಮಾಣ ಮಾಡಿರುವ ಚರಂಡಿಗಳನ್ನು ಗುರುತಿಸಿ ಕೊಂಡು ಆ ಚರಂಡಿಗಳಲ್ಲಿ ಹಾಳಾಗದಂತೆ ಸುರಕ್ಷಿತವಾಗಿ ಬಚ್ಚಿಟ್ಟು ಇತರೆ ಇಬ್ಬರ ನೆರವಿನಿಂದ ಮಾರಾಟ ಮಾಡುತ್ತಿದ್ದನು.
ಮಲ್ಲೆಶ್ವರ ಉಪ ವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ್ ನಾಯ್ಡು, ನಂದಿನಿ ಲೇಔಟ್ ಠಾಣೆ ಇನ್ಸ ಪೆಕ್ಟರ್ ವೆಂಕಟೇಗೌಡ, ಪಿಎಸ್‍ಐ ನಿತ್ಯಾನಂದಚಾರಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಶವಂತ ಪುರ ಠಾಣೆ ಪೊಲೀಸರು ಮಾದಕ ವಸ್ತು ಮಾರಾಟ ಮಾಡುತ್ತಿದ ಓರ್ವ ಆರೋಪಿಯನ್ನು ಬಂಧಿಸಿ 3.3 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಇಬ್ಬರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ತಲೆಮರೆಸಿ ಕೊಂಡಿದ್ದಾನೆ. ಆರೋಪಿ ಚಿಕ್ಕ ಚಿಕ್ಕ ಪ್ಯಾಕೆಟ್‍ಗಳಲ್ಲಿ ಯಶವಂತಪುರದ ಷರೀಫ್‍ನಗರದಲ್ಲಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದನು.
ಆಟೋ ರಿಕ್ಷಾದವನಿಗೆ ಹೆಚ್ಚಿನ ಬಾಡಿಗೆ ಕೊಡುವುದಾಗಿ ಹೇಳಿ ಕೆ.ಆರ್.ಪುರಂನ ವಿಳಾಸ ನೀಡಿ ಅಲ್ಲಿಂದ ಪಾರ್ಸೆಲ್ ತರಿಸಿಕೊಂಡು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ, ಮಾರಾಟ ಮಾಡುತ್ತಿದ್ದನು ಎಂದು ತನಿಖೆ ಯಿಂದ ತಿಳಿದು ಬಂದಿದೆ.
ಯಶವಂತಪುರ ಉಪ ವಿಭಾಗದ ಎಸಿಪಿ ಅರುಣ್ ಗೌಡ, ಇನ್ಸ್‍ಪೆಕ್ಟರ್ ಸುರೇಶ್, ಪಿಎಸ್‍ಐ ವಿನೋದ್ ರಾಠೋಡ್ ಹಾಗು ಸಿಬ್ಬಂದಿ ಗೋಪಾಲ್ ರಾಹುತ್ , ರಾಚಪ್ಪ ಹಕ್ಕಿ ಮತ್ತು ಮುತ್ತಪ್ಪ ಭಜಂತ್ರಿ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

Articles You Might Like

Share This Article