ಬೆಂಗಳೂರು, ಜ.24- ನೋಟರಿ ಕಾಯ್ದೆ ತಿದ್ದುಪಡಿಯಲ್ಲಿನ ಪ್ರಸ್ತಾವಿತ ಸೆಕ್ಷನ್5ನ್ನು ಕೈ ಬಿಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ದೇಶದ 75 ಸಾವಿರ ನೋಟರಿ ವಕೀಲರ ಹಿತದೃಷ್ಠಿಯಿಂದ ಪತ್ರ ಬರೆಯುತ್ತಿರುವುದಾಗಿ ಹೇಳಿರುವ ದೇವೆಗೌಡರು, ನೋಟರಿಗಳ ಅವಧಿಯನ್ನು ಐದು ವರ್ಷಗಳಿಗೆ ಸೀಮಿತಗೊಳಿಸುವ ಮತ್ತು ನೋಟರಿ ಪ್ರಮಾಣ ಪತ್ರಗಳ ಸಂಖ್ಯೆಗಳ ಮೇಲೆ ಮಿತಿ ಹೇರುವ ತಿದ್ದುಪಡಿ ಮಸೂದೆ ತರ್ಕಬದ್ಧವಾಗಿಲ್ಲ ಹಾಗೂ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ವಿಶ್ಲೇಷಿಸಿದ್ದಾರೆ.
ನೋಟರಿ ಕಾಯ್ದೆ 1952ಕ್ಕೆ ತಿದ್ದುಪಡಿ 2021ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ನೋಟರಿ ಸೇವೆಯನ್ನು ಗರಿಷ್ಠ 15 ವರ್ಷಗಳಿಗೆ ಪರಿಣಾಮಕಾರಿಯಾಗಿ ಮಿತಿಗೊಳಿಸಿದೆ. ಇದು ಅವಾಸ್ತವಿಕವಾದ ಮಸೂದೆಯಾಗಿದೆ ಎಂದಿದ್ದಾರೆ.
ವಕೀಲರು ನೋಟರಿಯಾಗಿ ಪರಿವರ್ತನೆಯಾಗುವುದು ಶಾಶ್ವತ ಮತ್ತು ಅವರು ಮರಳಿ ವೃತ್ತಿಗೆ ಮರಳುವುದು ಕಷ್ಟ ಸಾಧ್ಯ. ಪ್ರಸ್ತುತ ದಿನಗಳಲ್ಲಿ ವಕೀಲಿ ವೃತ್ತಿ ವೇಗವಾಗಿ ವಿಕಸನಗೊಳ್ಳುತ್ತಿದೆ, ಪ್ರತಿ ದಿನವೂ ಬದಲಾವಣೆಗಳನ್ನು ಬಯಸುತ್ತದೆ. 15 ವರ್ಷ ನೋಟರಿಯಾಗಿ ಉಳಿದು, ಕಾನೂನು ಅಭ್ಯಾಸ ಮಾಡದ ವಕೀಲರು ವಾಪಾಸ್ ಬಂದ ಬಳಿಕ ಹಿರಿಯ ವಕೀಲರ ಜೊತೆ ಸ್ಪರ್ಧೆ ಮಾಡಲು ಸಾಧ್ಯವೆ ಎಂದು ದೇವೇಗೌಡರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕ ರಾಜ್ಯ ನೋಟರಿ ಕಲ್ಯಾಣ ಟ್ರಸ್ಟ್ತಮಗೆ ಮನವಿ ನೀಡಿದ್ದು, ನೋಟರಿ ಕಾಯ್ದೆ, 1952 ರ ಸೆಕ್ಷನ್ 5 ರ ತಿದ್ದುಪಡಿ ಭಾರತದ ಸಂವಿಧಾನದ 14, 19, 21 ಮತ್ತು 309 ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ. ಹೀಗಾಗಿ ಎಲ್ಲಾ ನೋಟರಿಗಳ ಅನುಕೂಲಕ್ಕಾಗಿ ಸೆಕ್ಷನ್ 5ನ್ನು ಕೈ ಬಿಡಬೇಕು ಎಂದು ದೇವೇಗೌಡರು ಪ್ರಧಾನಿ ಅವರಲ್ಲಿ ಮನವಿ ಮಾಡಿದ್ದಾರೆ.
