ಖ್ಯಾತ ಸಾಹಿತಿ ಚಂದ್ರಶೇಖರ್ ಪಾಟೀಲ್(ಚಂಪಾ) ಇನ್ನಿಲ್ಲ..!

Social Share

ಬೆಂಗಳೂರು,ಜ.10-ಬಂಡಾಯ ಸಾಹಿತಿ, ನಾಟಕಕಾರ, ಕನ್ನಡಪರ ಹೋರಾಟಗಾರ, ಗೋಕಾಕ್ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಪ್ರೊ.ಚಂದ್ರಶೇಖರ್ ಪಾಟೀಲ್(83) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಒಬ್ಬ ಪುತ್ರ, ಪುತ್ರಿ ಸಹಿತ ಅಪಾರ ಬಂಧುಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ನಗರದ ಯಲಚೇನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತಂದು ಅಂತಿಮ ದರ್ಶನಕ್ಕಿಟ್ಟು ನಂತರ ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಎಂಬ ಗ್ರಾಮದವರಾದ ಚಂಪಾ ಅವರು 1939ರ ಜೂನ್ 18ರಂದು ಜನಿಸಿದರು.ತಂದೆ ಬಸವರಾಜ ಹಿರೇಗೌಡ, ತಾಯಿ ಮುರಿಗೆವ್ವ. ಹುಟ್ಟು ಹೋರಾಟದ ಮನೋಭಾವದವರಾಗಿದ್ದ ಚಂಪಾ ಅವರು ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ಭಾಷಾ ಚಳುವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದವರು.
ಬಂಡಾಯ, ನವೋದಯ ಸಾಹಿತ್ಯ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಚಂದ್ರಶೇಖರ ಪಾಟೀಲ್ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿ ಹಲವು ಹೊಸತನಗಳಿಗೆ ಮುನ್ನುಡಿ ಬರೆದಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಚಂಪಾ ಎಂದೇ ಚಿರಪರಿಚಿತರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕೂಡ ಕನ್ನಡದ ಮೇಲೆ ಅಗಾಧವಾದ ಹಿಡಿತ ಹೊಂದಿದ್ದರು. ಕವಿ, ನಾಟಕಕಾರ, ಸಂಘಟನಾಕಾರ, ಪತ್ರಿಕಾ ಸಂಪಾದಕ, ಆಡಳಿತಾಗಾರ, ಕನ್ನಡಪರ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ದರಾಗಿದ್ದವರು.
ಇವರ ಆರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಕಾಲೇಜು ವಿದ್ಯಾರ್ಥಿಯಾಗಿದ್ದ ವಿ.ಕೃ.ಗೋಕಾಕರ ಮಾರ್ಗದರ್ಶನ ಸಿಕ್ಕಿತು. ವಿದ್ಯಾರ್ಥಿಯಾಗಿದ್ದಾಗಲೇ ಅವರ ಬಾನುಲಿ ಎಂಬ ಕವನ ಸಂಕಲನ ಪ್ರಕಟವಾಯಿತು.ನವ್ಯ ಮಾರ್ಗದಲ್ಲಿ ಕಾವ್ಯ ಕೃಷಿ ಆರಂಭಿಸಿದ ಅವರು 1962ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು.
ಇದಲ್ಲದೆ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್‍ನ ಲೀಡ್ಸ್ ವಿವಿಯಿಂದ ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದ್‍ನ ಕೇಂದ್ರೀಯ ಇಂಗ್ಲಿಷ್ ಸಂಸ್ಥೆಯಿಂದ ಇಂಗ್ಲಿಷ್ ಅಧ್ಯಯನ ಡಿಪ್ಲೊಮಾ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಅಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದಾಗಿತ್ತು.
ಸ್ನೇಹಿತರಾದ ಗೀರೆಡ್ಡಿ ಗೋವಿಂದರಾಜ್, ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಜೊತೆ ಸೇರಿ ಸಂಕ್ರಮಣ(1964) ಹೆಸರಿನಲ್ಲಿ ದ್ವೈಮಾಸಿಕ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದರು. 2018ರವರೆಗೆ ಪತ್ರಿಕೆ ಪ್ರಕಟವಾಗಿದೆ. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜೆಪಿ ಚಳುವಳಿ ಬೆಂಬಲಿಸಿ ಜೈಲುವಾಸ ಅನುಭವಿಸಿದವರು.
ಸಂಕ್ರಮಣ ಕಾವ್ಯ, ಗಾಂ ಗಾಂ, ಜೂನ್ 75 ಮಾರ್ಚ್ 77, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್ ಮಂಡೇಲ, ಕನ್ನಡ ನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ, ಬೇಂದ್ರೆ ನಾಕಂಡಂತೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.ರಾಜ್ಯ ಸಾಹಿತ್ಯ ಅಕಾಡೆಮಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ, ಶಂಕರಗೌಡ ರಂಗಭೂಮಿ, ಆಳ್ವಾಸ್ ನುಡಿಸಿರಿ, ಪಂಪ , ಬಸವ ಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
2017ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಂಡಲ್ ವರದಿಯ ಅನುಷ್ಠಾನ, ರೈತರ ಚಳುವಳಿ, ಗೋಕಾಕ್ ಚಳುವಳಿ ಹಲವು ಬಂಡಾಯ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
#ಸಂತಾಪ:
ಚಂಪಾ ಅವರ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಅರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡಪರ ಹೋರಾಟಗಾರರಾದ ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಶಾಸಕರು, ವಿಧಾನಪರಿಷತ್ ಸದಸ್ಯರು, ಸಾಹಿತಿಗಳು, ಬರಹಗಾರರು ಸೇರಿದಂತೆ ಹಲವು ಮುಖಂಡರು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
# ಚಂಪಾ ನಿಧನಕ್ಕೆ ಸಿಎಂ ಸೇರಿ ಗಣ್ಯರ ಸಂತಾಪ
ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊ.ಚಂದ್ರಶೇಖರ್ ಪಾಟೀಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರಾದ ಚಂದ್ರಶೇಖರ್ ಪಾಟೀಲ್ ಅವರು ಚಂಪಾ ಎಂದೇ ಪ್ರಸಿದ್ಧರಾದವರು. ಚಂಪಾ ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು-ನುಡಿಗೆ ಅವರ ಕೊಡುಗೆ ಅಪಾರ. ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದವರು ಎಂದು ಬಣ್ಣಿಸಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅವರು ಪ್ರಾಧ್ಯಾಪಕರಾಗಿ, ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಕ್ರಮಣ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕತ್ವದ ಸಾರಥ್ಯ ವಹಿಸಿದ್ದರು. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಚಂಪಾರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಕುಟುಂಬದವರಿಗೆ , ಅಭಿಮಾನಿ ಮತ್ತು ಶಿಷ್ಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
# ಬಿಎಸ್‍ವೈ ಸಂತಾಪ:
ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರ, ಚಂಪಾ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ ಪಾಟೀಲ ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ನಾಡು ಒಬ್ಬ ಹಿರಿಯ ಕನ್ನಡದ ಧ್ವನಿಯನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬದವರಿಗೆ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
# ಚಂಪಾ ನಿಧನಕ್ಕೆ ಸ್ಪೀಕರ್ ಸಂತಾಪ
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಬಹುಮುಖ ವ್ಯಕ್ತಿತ್ವದ ಸಾಹಿತಿ ಚಂದ್ರಶೇಖರ ಪಾಟೀಲ್ ಅವರ ನಿಧನಕ್ಕೆ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಂಬನಿ ಮಿಡಿದಿದ್ದಾರೆ.ವಿದ್ವಾಂಸರು, ಕ್ರಿಯಾಶೀಲ ಲೇಖಕರೂ, ರಂಗಕರ್ಮಿ ಮತ್ತು ಪತ್ರಕರ್ತರಾಗಿದ್ದ ಚಂಪಾ ಅವರು ತಮ್ಮ ಆಳವಾದ ಜ್ಞಾನದಿಂದ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು .
ಚಂಪಾ ಅವರ ನಿಧನದಿಂದ ರಾಜ್ಯ ಬಹುಮುಖ ಪ್ರತಿಭೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂವೇದನೆ ಇರುತ್ತದೆ ಎಂದು ಸ್ಪೀಕರ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Articles You Might Like

Share This Article