ಬೆಂಗಳೂರು, ಆ.12- ರಾಷ್ಟ್ರಪ್ರಶಸ್ತಿ ಪುರಸ್ಕøತ, ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಸರ್ಕಾರವು ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ.
ಸುಬ್ಬಣ್ಣ ಅವರು ನಿನ್ನೆ ನಿಧನರಾಗಿದ್ದು, ಮೃತರ ಗೌರವಾರ್ಥ ಪೊಲೀಸ್ ಗೌರವಗಳೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕನಿಷ್ಟ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕೋವಿಡ್-19ರ ಮಾರ್ಗಸೂಚಿಗಳನ್ನು ಪಾಲಿಸಿ ನೆರವೇರಿಸಲು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಸುಬ್ಬಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಸಿ.ಎನ್.ಅಶ್ವತ್ಥ್ ನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್ ಮತ್ತಿತರ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.