155ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದ ಮೂವರ ಬಂಧನ

Social Share

ಬೆಂಗಳೂರು,ಅ.10- ನಗರ ಸೇರಿದಂತೆ ರಾಜ್ಯಾದ್ಯಂತ 155ಕ್ಕೂ ಹೆಚ್ಚು ಸರಗಳ್ಳತನ ಮಾಡಿ ಪರಾರಿಯಾಗಿದ್ದ ಕುಖ್ಯಾತ ಸರಗಳ್ಳ ಸೇರಿದಂತೆ ಮೂವರನ್ನು ಬಂಧಿಸಿರುವ ಬಾಗಲಗುಂಟೆ ಠಾಣೆ ಪೊಲೀಸರು 5 ಲಕ್ಷ ರೂ. ಬೆಲೆಯ 100 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಅಚ್ಯುತ್ ಅಲಿಯಾಸ್ ಗಣಿ, ಸಿದ್ದರಾಜು ಮತ್ತು ಪ್ರಸನ್ನ ಬಂಧಿತರು.

ಸೆ.10ರಂದು ಬೆಳಗ್ಗೆ 5.30ರ ಸುಮಾರಿನಲ್ಲಿ ಭುವನೇಶ್ವರಿನಗರ ಟಿ.ದಾಸರಹಳ್ಳಿ, 8ನೇ ಮುಖ್ಯರಸ್ತೆ, 4ನೇ ಕ್ರಾಸ್ ನಿವಾಸಿ ತಮ್ಮ ಮನೆಯ ಮುಂದೆ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದರೋಡೆಕೋರರು ಏಕಾಏಕಿ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರ ಎಳೆದಿದ್ದಾರೆ.

ತಕ್ಷಣ ಅವರು ಎಚ್ಚೆತ್ತುಕೊಂಡು ಸರವನ್ನು ಬಿಗಿಯಾಗಿ ಹಿಡಿದುಕೊಂಡಾಗ ಸರ ತುಂಡಾಗಿ ಸುಮಾರು 35 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸರಗಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪ್ರಮುಖ ಆರೋಪಿ ಅಚ್ಯುತ್ ಅಲಿಯಾಸ್ ಗಣಿ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇನ್ನು ಇಬ್ಬರು ಭಾಗಿಯಾಗಿರುವ ಬಗ್ಗೆ ತಿಳಿಸಿದ್ದಾನೆ.

ಈ ಆರೋಪಿಯ ಮಾಹಿತಿ ಆಧರಿಸಿ ತನಿಖೆ ಕೈಗೊಂಡು ನಂತರ ಆರೋಪಿಗಳಾದ ಸಿದ್ದರಾಜು ಮತ್ತು ಪ್ರಸನ್ನನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಮೂವರನ್ನು ಬಂಧಿಸಿ 5 ಲಕ್ಷ ರೂ. ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಖ್ಯಾತ ಆರೋಪಿ ಅಚ್ಯುತ್ ಅಲಿಯಾಸ್ ಗಣಿ ಹಳೆಯ ಆರೋಪಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಕೇಶವಾಪುರ, ಯಲ್ಲಾಪುರ, ಹುಬ್ಬಳ್ಳಿಯ ಅಶೋಕ ನಗರ, ಹೊಸಪೇಟೆ ಎಕ್ಸ್‍ಟೆಷನ್, ವಿದ್ಯಾನಗರ, ಹಾಸನ ಗ್ರಾಮಾಂತರ, ದುದ್ದ, ತುಮಕೂರು ಟೌನ್, ಹೆಬ್ಬೂರು, ಜಯನಗರ, ಹಾವೇರಿ, ಕುಮುಟಾ, ಎಂ.ಕೆ.ದೊಡ್ಡಿ, ಬಳ್ಳಾರಿ, ಚನ್ನಪಟ್ಟಣ, ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿನ 155ಕ್ಕೂ ಹೆಚ್ಚು ಸರಗಳವು ಪ್ರಕರಣಗಳು ದಾಖಲಾಗಿವೆ.

ಪ್ರಕರಣಗಳಿಗೆ ಸಂಬಂಧಿಸಿದಂತೆ 2018ನೇ ಸಾಲಿನಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ 4 ವರ್ಷಗಳ ಕಾಲ ಕಾರಾಗೃಹ ವಾಸ ಅನುಭವಿಸಿ ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಎರಡನೇ ಆರೋಪಿ ಸಿದ್ದರಾಜು ರಾತ್ರಿ ವೇಳೆ ಬೀಗ ಹಾಕಿರುವ ಅಂಗಡಿಗಳನ್ನು ಗುರುತಿಸಿ ಅವುಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದನು. ಈತನ ವಿರುದ್ಧ ಹೊಸಪೇಟೆ, ಹಲಸೂರು ಗೇಟ್ ಠಾಣೆಯ ಪ್ರಕ ರಣದಲ್ಲಿ ಜೈಲಿಗೆ ಹೋಗಿಬಂದಿದ್ದಾನೆ.

ಮೂರನೇ ಆರೋಪಿ ಪ್ರಸನ್ನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿರುತ್ತಾನೆ. ಜೈಲಿನಲ್ಲಿ ಪರಿಚಿತರಾದ ಆರೋಪಿಗಳು ಪ್ರಮುಖ ಆರೋಪಿ ಅಚ್ಯುತ್ ಈ ಹಿಂದೆ ಜೈಲಿನಲ್ಲಿದ್ದಾಗ ಸಿದ್ದರಾಜು ಮತ್ತು ಪ್ರಸನ್ನನ ಪರಿಚಯವಾಗಿದ್ದು, ಸರಗಳ್ಳತನ ಮಾಡಿದರೆ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂದು ಅವರಿಗೆ ತಿಳಿಸಿ ಜೈಲಿನಿಂದ ಹೊರಬಂದ ನಂತರ ಒಟ್ಟಿಗೆ ಸೇರಿಕೊಂಡು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಆರೋಪಿಗಳು ಕೃತ್ಯ ಎಸಗುವುದಕ್ಕೂ ಮುಂಚೆ ತುಮಕೂರಿನಲ್ಲಿ ಪಲ್ಸರ್ ಬೈಕ್‍ನ್ನು ಕಳವು ಮಾಡಿಕೊಂಡು ಬಂದು ಅದರ ನಂಬರ್ ಪ್ಲೇಟ್‍ನ್ನು ಬದಲಾಯಿಸಿ ಸರಗಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.

ಆರೋಪಿಗಳ ಬಂಧನದಿಂದ ನಗರದ ಬಾಗಲಗುಂಟೆ, ವಿದ್ಯಾರಣ್ಯಪುರ, ನೆಲಮಂಗಲ ಟೌನ್, ನಂದಿನಿಲೇಔಟ್ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 4 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ.
ಎಸಿಪಿ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಸಂದೀಪ್ ಪಿ. ಕೌರಿ ಅವರ ನೇತೃತ್ವದ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article