Sunday, November 2, 2025
Homeರಾಜಕೀಯ | Politicsರಾಜ್ಯದಲ್ಲಿ ನವೆಂಬರ್‌ ರಾಜಕೀಯ ಕ್ರಾಂತಿ, ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಗೆ ದೌಡು

ರಾಜ್ಯದಲ್ಲಿ ನವೆಂಬರ್‌ ರಾಜಕೀಯ ಕ್ರಾಂತಿ, ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಗೆ ದೌಡು

November political revolution in the state, Minister Satish Jarkiholi rushes to Delhi

ಬೆಂಗಳೂರು, ನ.2- ರಾಜಕೀಯವಾಗಿ ನವೆಂಬರ್‌ ಕ್ರಾಂತಿಯ ಚರ್ಚೆಗಳ ನಡುವೆ ಸಚಿವಸಂಪುಟದ ಪ್ರಭಾವಿ ಸಚಿವರ ದೆಹಲಿ ಯಾತ್ರೆಗಳು ಮತ್ತಷ್ಟು ಹೆಚ್ಚಾಗಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿ ವರಿಷ್ಠರ ಆಪ್ತರನ್ನು ಭೇಟಿ ಮಾಡಿ ವಾಪಸ್ಸಾದ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಕೂಡ ದೆಹಲಿಯತ್ತ ಮುಖ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿ ಸೋನಿಯಾ ಗಾಂಧಿಯವರ ಆಪ್ತರಾದ ಅಂಬಿಕಾ ಸೋನಿ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಕೆಲವು ಹಿರಿಯ ನಾಯಕರ ಜೊತೆಯೂ ಮಾತುಕತೆ ನಡೆಸಿದ್ದರು.ನವೆಂಬರ್‌ ಕ್ರಾಂತಿಯ ವಿಚಾರವಾಗಿ ನಾನಾ ರೀತಿಯ ವದಂತಿಗಳು ಹಬ್ಬುತ್ತಿವೆ. ಡಿ.ಕೆ.ಶಿವಕುಮಾರ್‌ ಅವರ ಮೌನ ತಂತ್ರಗಾರಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಕಳವಳ ಸೃಷ್ಟಿಸಿದೆ. ಹೀಗಾಗಿ ಸಿದ್ದರಾಮಯ್ಯನವರ ಆಪ್ತರಾಗಿರುವ ಸಚಿವ ಸತೀಶ್‌ ಜಾರಕಿಹೊಳಿ ಮೂರು ದಿನ

- Advertisement -

ದೆಹಲಿಯಲ್ಲಿ ಬೀಡುಬಿಟ್ಟು ತಮದೇ ಕಾರ್ಯತಂತ್ರ ಬಳಸಲಿದ್ದಾರೆ ಎಂಬ ಚರ್ಚೆ ನಡೆದಿವೆ.
ಅಧಿಕಾರ ಹಂಚಿಕೆ ಸೇರಿದಂತೆ ಯಾವುದೇ ರಾಜಕೀಯ ವಿಚಾರಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಅಖಾಡ ಪ್ರವೇಶ ಮಾಡುವುದಿಲ್ಲ. ಬದಲಾಗಿ ತಮ ಆಪ್ತರನ್ನು ಮೊದಲು ಬಿಟ್ಟು ಪೂರಕ ವೇದಿಕೆ ಸೃಷ್ಟಿಸಿಕೊಳ್ಳುವ ತಾಂತ್ರಿಕತೆಯನ್ನು ಮೊದಲಿನಿಂದಲೂ ಅನುಸರಿಸುತ್ತಿದ್ದಾರೆ. ಈಗಲೂ ಸಿದ್ದರಾಮಯ್ಯ ಅದೇ ಮಾದರಿಯ ರಾಜಕಾರಣ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.

ಡಿ.ಕೆ.ಶಿವಕುಮಾರ್‌ ರಾಜ್ಯದ ಯಾವ ನಾಯಕರನ್ನು ನಂಬಿಕೊಳ್ಳದೆ ನೇರವಾಗಿ ದೆಹಲಿಯ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ ನೂರು ಕಾಂಗ್ರೆಸ್‌‍ ಕಚೇರಿಗಳ ನಿರ್ಮಾಣ ಯೋಜನೆಯ ಉದ್ಘಾಟನೆಗೆ ಡಿ.ಕೆ.ಶಿವಕುಮಾರ್‌ ವರಿಷ್ಠರ ಪೈಕಿ ರಾಹುಲ್‌ ಗಾಂಧಿ ಜೊತೆಗೆ, ಸೋನಿಯಾ ಗಾಂಧಿಯವರನ್ನು ಆಹ್ವಾನಿಸಲು ಪ್ರಯತ್ನಿಸುತ್ತಿದ್ದಾರೆ. ಆ ಕಾರಣಕ್ಕೆ ಸೋನಿಯಾ ಗಾಂಧಿಯವರ ಜೊತೆ ಚರ್ಚೆ ಮಾಡಿದ್ದರು ಎಂಬ ಸ್ಪಷ್ಟನೆಗಳು ಕೇಳಿಬರುತ್ತಿವೆ. ಆದರೆ ಇದನ್ನು ಸಿದ್ದರಾಮಯ್ಯ ಅವರ ಬಣ ನಂಬುತ್ತಿಲ್ಲ.

ಸತೀಶ್‌ ಜಾರಕಿಹೊಳಿ ಅವರು ತಮ ಇಲಾಖೆಯ ಕಾರ್ಯ ಯೋಜನೆಗಳ ಸಂಬಂಧಪಟ್ಟಂತೆ ಚರ್ಚಿಸಲು ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳುತ್ತಲೇ ತೆರೆಮರೆಯಲ್ಲಿ ಮತ್ತೊಂದು ತಂತ್ರಗಾರಿಕೆ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡುವ ಮೂಲಕ ಎಲ್ಲಾ ಗೊಂದಲಗಳನ್ನು ಬಗೆಹರಿಸಿ, ಸತೀಶ್‌ ಜಾರಕಿಹೊಳಿ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧಿಕಾರ ಹಂಚಿಕೆಗೆ ದೆಹಲಿಯಲ್ಲಿ ಒಪ್ಪಂದವಾಗಿದೆ. ನವೆಂಬರ್‌ 20ಕ್ಕೆ ಕಾಂಗ್ರೆಸ್‌‍ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗುತ್ತವೆ. ಸಿದ್ದರಾಮಯ್ಯ ತಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಳಿದ ಅವಧಿಗೆ ಡಿ.ಕೆ.ಶಿವಕುಮಾರ್‌ ಅವರಿಗೆ ಅವಕಾಶ ಕೊಡಲಿದ್ದಾರೆ. ಈ ರೀತಿಯೇ ನಡೆಯಬೇಕು ಎಂಬ ಒತ್ತಾಯಗಳು ಕೂಡ ಇದೆ. ಈ ವಿಷಯವಾಗೇ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಬಾರದು, ಅವರ ಪರವಾಗಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ದೊಡ್ಡ ಮತ ಬ್ಯಾಂಕ್‌ ಇದೆ. ಹೀಗಾಗಿ ಪ್ರಸ್ತುತ ಇರುವ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಸತೀಶ್‌ ಜಾರಕಿಹೊಳಿ ದೆಹಲಿಯ ವರಿಷ್ಠರ ಮುಂದೆ ಪ್ರತಿಪಾದಿಸುವ ಸಾಧ್ಯತೆ ಇದೆ.

ಸತೀಶ್‌ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಸಮಯ ಕೇಳಿದ್ದು, ಅದಕ್ಕೆ ಎಐಸಿಸಿ ಅಧ್ಯಕ್ಷರ ಕಚೇರಿಯಿಂದಲೂ ಸಕಾರಾತಕ ಸ್ಪಂದನೆ ಸಿಕ್ಕಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಸತೀಶ್‌ ಜಾರಕಿಹೊಳಿ ಬಳಿಕ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಸೇರಿದಂತೆ ಸಿದ್ದರಾಮಯ್ಯ ಬಣದ ಹಲವು ನಾಯಕರು ದೆಹಲಿಗೆ ತೆರಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನವಂಬರ್‌ ತಿಂಗಳ ಕ್ರಾಂತಿಗೆ ಇನ್ನೂ 20 ದಿನಗಳಿವೆ. ಅದಕ್ಕೂ ಮುನ್ನವೇ ಕಾಂಗ್ರೆಸ್‌‍ನಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿವೆ.

ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ವಾದ-ಪ್ರತಿವಾದ ಹೆಚ್ಚಾಗಿವೆ. ಪರಸ್ಪರ ಸಮರ್ಥನೆಗಳು ಕಂಡುಬರುತ್ತಿವೆ. ಈ ಎಲ್ಲ ಗೊಂದಲಗಳಿಗೆ ಬ್ರೇಕ್‌ ಹಾಕಬೇಕಾದರೆ ಹೈಕಮಾಂಡ್‌ ಸ್ಪಷ್ಟ ಸಂದೇಶ ರವಾನಿಸಬೇಕು ಎಂಬ ಒತ್ತಡಗಳಿವೆ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಮುಂದಾಗಿರುವುದರ ಹಿಂದೆ ಬಿಹಾರದ ಚುನಾವಣೆ ಕಾರಣವಿದೆ ಎಂಬ ಮಾತುಗಳಿವೆ. ವಿರೋಧ ಪಕ್ಷಗಳು ಇದನ್ನೇ ಮುಂದೆ ನೆಪ ಮಾಡಿಕೊಂಡು ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಹಣಕಾಸಿನ ನೆರವು ನೀಡುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿವೆ.

ಸತೀಶ್‌ ದೆಹಲಿ ಭೇಟಿ ತಪ್ಪಾಗಿ ಅರ್ಥೈಸುವುದು ಬೇಡ:ಡಿ.ಕೆ.ಶಿವಕುಮಾರ್‌
ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಗೆ ಭೇಟಿ ನೀಡುತ್ತಿರುವುದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ಎಲ್ಲಾ ಪ್ರವಾಸಗಳು ರಾಜಕೀಯ ಕಾರಣಕ್ಕಾಗಿಯೇ ನಡೆಯುವುದಿಲ್ಲ. ತಾವು ಕೂಡ ದೆಹಲಿಗೆ ಭೇಟಿ ನೀಡುತ್ತಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್‌ ಜಾರಕಿಹೊಳಿ ಇಲಾಖೆಯ ಕಾರಣಗಳಿಗಾಗಿಯೂ ದೆಹಲಿಗೆ ಭೇಟಿ ನೀಡಬಹುದು. ಅಲ್ಲಿರುವ ಕಾಂಗ್ರೆಸ್‌‍ ಕಚೇರಿ ನಮಗೆ ದೇವಸ್ಥಾನವಿದ್ದಂತೆ. ದೆಹಲಿಗೆ ಹೋದ ಮೇಲೆ ಪಕ್ಷದ ಕಚೇರಿಗೆ ಹೋಗುವುದು ವರಿಷ್ಠರನ್ನು ಭೇಟಿ ಮಾಡುವುದು ಸಾಮಾನ್ಯ. ಇದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯ ಇಲ್ಲ ಎಂದರು.

ಸಚಿವರು, ಶಾಸಕರು ಸೇರಿದಂತೆ ಯಾರು ಬೇಕಾದರೂ ದೆಹಲಿಗೆ ಹೋಗಲಿ. ನನಗೂ ನವೆಂಬರ್‌ 5 ಅಥವಾ 7ರಂದು ಬಿಹಾರದ ವಿಧಾನಸಭಾ ಚುನಾವಣೆಗೆ ಹೋಗಬೇಕಿದೆ. ಈ ಮಧ್ಯೆ ದೆಹಲಿಯಲ್ಲಿ ಕೇಂದ್ರ ಸಚಿವರು ಸಭೆ ಕರೆದಿದ್ದಾರೆ. ಜೊತೆಗೆ ಕಾವೇರಿ ವಿವಾದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ತಾವು ಪಡೆದುಕೊಂಡಿದ್ದು, ದೆಹಲಿಯಲ್ಲಿ ವಕೀಲರ ಜೊತೆ ಚರ್ಚಿಸಬೇಕಿದೆ.

ತಮಿಳುನಾಡಿನ ತಕರಾರು ಮತ್ತು ನಮ ಮನವಿಗಳ ವಿವರ ನೀಡಬೇಕಿದೆ ಎಂದರು.
ಕೆಲವು ಸಂದರ್ಭಗಳಲ್ಲಿ ಬೇರೆ ಬೇರೆ ರಾಜ್ಯಗಳ ಪಕ್ಷ ಸಂಘಟನೆ ಹಾಗೂ ಚುನಾವಣಾ ಉಸ್ತುವಾರಿಗೆ ರಾಜ್ಯದ ಶಾಸಕರನ್ನು ನಿಯೋಜಿಸಲಾಗಿರುತ್ತದೆ. ನಮ ರಾಜ್ಯದ ಶಾಸಕರಾದ ರಿಜ್ವಾನ್‌ ಅರ್ಷದ್‌, ಶ್ರೀನಿವಾಸ್‌‍ ಮಾನೆ, ಸಂಸದರಾದ ಶ್ರೇಯಸ್‌‍ ಪಟೇಲ್‌‍, ಇ. ತುಕಾರಾಂ ಸೇರಿದಂತೆ ಅನೇಕರಿಗೆ ಒರಿಸ್ಸಾದ ಉಸ್ತುವಾರಿ ಹಾಕಲಾಗಿತ್ತು. ನಮ ರಾಜ್ಯಕ್ಕೂ ಇದೇ ರೀತಿ ಅನೇಕ ನಾಯಕರು ಆಗಮಿಸುತ್ತಿರುತ್ತಾರೆ ಎಂದು ಅವರು ಹೇಳಿದರು.
ಮಹಿಳಾ ಕ್ರಿಕೆಟ್‌ನಲ್ಲಿ ಇಂದು ಸೌತ್‌ ಆಫ್ರಿಕಾ ತಂಡವನ್ನು ಎದುರಿಸುತ್ತಿರುವ ಭಾರತದ
ತಂಡಕ್ಕೆ ಜಯ ಸಿಗಲಿ ಎಂದು ಅವರು ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.

- Advertisement -
RELATED ARTICLES

Latest News