ಸರ್ಕಾರಿ ಭೂಮಿ ಅಕ್ರಮ ಮಾರಾಟ ತಡೆಯಬೇಕು : ಎನ್.ಆರ್.ರಮೇಶ್

Spread the love

ಬೆಂಗಳೂರು, ಅ.21- ನೂರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಭೂಮಿಯ ಅಕ್ರಮ ಮಾರಾಟವನ್ನು ತಡೆ ಹಿಡಿಯಬೇಕು ಎಂದು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು ವರ್ತೂರು ಗ್ರಾಮದ ಸರ್ವೆ ನಂ.126ರಲ್ಲಿ 20.24 ಎಕರೆ ಜಮೀನು ಸರ್ಕಾರಿ ಸ್ವತ್ತಾಗಿರುತ್ತದೆ. ಈ ಪೈಕಿ 10 ಎಕರೆ ವಿಸ್ತೀರ್ಣ ಸ್ವತ್ತನ್ನು ಬೇರೆ ಕೋಮಿನ ಪ್ರಾರ್ಥನಾ ಮಂದಿರಕ್ಕೆ ವರ್ಗಾವಣೆ ಮಾಡಲಾಗಿದ್ದು , ಅದರ ಆಡಳಿತ ಮಂಡಳಿಯವರು ಬಿಲ್ಡರ್‍ವೊಬ್ಬರಿಂದ 10 ಕೋಟಿ ರೂ. ನಗದು ಪಡೆದು ಪರಭಾರೆ ಮಾಡಿಕೊಟ್ಟಿರುತ್ತಾರೆ.

ಈ ಪರಭಾರೆ ಸಂಬಂಧ ಸಹಾಯಕ ಆಯುಕ್ತರಿಂದ ಸೇಲ್ ಪರ್ಮಿಷನ್‍ಗೆ ಮನವಿ ಮಾಡಿಕೊಳ್ಳಲಾಗಿದೆ. ವಾಸ್ತವವಾಗಿ ಮಾರಾಟವಾಗಿರುವ ಸ್ವತ್ತು ಸಾರ್ವಜನಿಕರ ಉಪಯೋಗಕ್ಕೆ ಮಾತ್ರವೇ ಬಳಸಬೇಕಾಗಿರುತ್ತದೆ.

ಇದರ ಜತೆಗೆ ಇತರ 10 ಎಕರೆ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದು , ಅಲ್ಲಿ ಬೆಳೆದಿರುವ ನೀಲಗಿರಿ ಮರಗಳನ್ನು ಆಡಳಿತ ಮಂಡಳಿಯವರೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರಸ್ತುತ ಮಾರುಕಟ್ಟೆಯಾಗಿ ಕೋಟ್ಯಂತರ ರೂ. ಬೆಲೆ ಬಾಳುವ ಸರ್ಕಾರಿ ಭೂಮಿಯ ಅಕ್ರಮ ಪರಭಾರೆಗೆ ಕಡಿವಾಣ ಹಾಕಿ ಜಮೀನಿನ ಸುತ್ತ ಬೇಲಿ ನಿರ್ಮಿಸಬೇಕು ಎಂದು ರಮೇಶ್ ಅವರು ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.

Facebook Comments