ಬೆಂಗಳೂರು, ಸೆ.14- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸವಾಲು ಹಾಕಿರುವ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು, ನಿಮ್ಮ ಆಡಳಿತಾವಧಿಯಲ್ಲಿ ನಡೆದಿದ್ದ ಎಪಿಪಿ ಹಾಗೂ ಎಜಿಪಿ ನೇಮಕಾತಿ ಹಗರಣದ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.
2013ರಿಂದ 2018ರವರೆಗಿನ ನಿಮ್ಮ ಆಡಳಿತಾವಧಿಯಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇದ್ದ 197 ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಅಸಿಸ್ಟೆಂಟ್ ಗೌರ್ನಮೆಂಟ್ ಪ್ಲೀಡರ್ ಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾ ಚಾರ ನಡೆದಿದ್ದರೂ ನೀವು ಜಾಣ ಕುರುಡರಂತೆ ವರ್ತಿಸಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಎಪಿಪಿ ಮತ್ತು ಎಜಿಪಿ ಪರೀಕ್ಷೆ ಗಳಲ್ಲಿ ಉತ್ತೀರ್ಣರಾದ 1,970 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಪೈಕಿ, ಕಾನೂನು ಬಾಹಿರವಾಗಿ ಆಯ್ಕೆಯಾಗಿರುವ 197 ಮಂದಿಯ ಉತ್ತರ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲೆ ಉತ್ತರ ಪತ್ರಿಕೆಗಳನ್ನು ಸುಟ್ಟು ಹಾಕಲು ನೀವು ಹಾಗೂ ಅಂದಿನ ಕಾನೂನು ಸಚಿವರಾಗಿದ್ದ ಜಯ ಚಂದ್ರ ಅವರೆ ಕಾರಣ ಎಂದು ರಮೇಶ್ ದೂರಿದ್ದಾರೆ.
ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ
ಆಯ್ಕೆಯಾದ ಅಭ್ಯರ್ಥಿಗಳನ್ನು ಅವರ ವಾಸಸ್ಥಾನದಿಂದ ಕನಿಷ್ಠ 150 ರಿಂದ 200 ಕಿ.ಮಿ. ಗಳಷ್ಟು ದೂರದ ನಗರಗಳಲ್ಲಿರುವ ನ್ಯಾಯಾಲಯಗಳಿಗೆ ನಿಯೋಜನೆ ಮಾಡಬೇಕೆಂಬ ನಿಯಮ ಗಳಿದ್ದರೂ ಸಹ ಅವರವರ ವಾಸ ಸ್ಥಾನಗಳಿಗೆ ಸಮೀಪವಿರುವ ನ್ಯಾಯಾಲಯಗಳಲ್ಲಿ ನಿಯೋಜನೆ ಮಾಡಿರುವ ಕಾರಣವೇನು ?
ಕಾನೂನು ಬಾಹೀರವಾಗಿ ಆಯ್ಕೆಯಾಗಿರುವ 197 ಮಂದಿ ಎಪಿಪಿ ಮತ್ತು ಎಜಿಪಿ ಹುದ್ದೆಗಳ ನೇಮಕಾತಿಯಲ್ಲಿ ತಲಾ 30 ರಿಂದ 40 ಲಕ್ಷ ರೂ. ಗಳಿಗೂ ಹೆಚ್ಚು ಹಣ ವಸೂಲಿ ಮಾಡಲಾಗಿರುವುದು ಸುಳ್ಳೇ? ಈ ಬೃಹತ್ ಹಗರಣದಲ್ಲಿ 70 ಕೋಟಿ ರೂ. ಗಳಿಗೂ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ಸುಳ್ಳೇ? ಈ ಬೃಹತ್ ಹಗರಣದಲ್ಲಿ ತಮ್ಮ ಮತ್ತು ಟಿ. ಬಿ. ಜಯಚಂದ್ರರವರ ಪಾತ್ರವಿದೆಯೇ? ಇಲ್ಲವೇ? ಈ ಬಗ್ಗೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ತಾವು ಮತ್ತು ಟಿ. ಬಿ. ಜಯಚಂದ್ರ ಅವರು ತಮ್ಮ ಪ್ರಭಾವವನ್ನು ಬಳಸಿ ಬಿ ರಿಪೋರ್ಟ್ ಹಾಕಿಸಿದ್ದು ಸುಳ್ಳೇ ಎಂದು ತಿಳಿಸಿ ಎಂದು ಅವರು ಸವಾಲು ಹಾಕಿದ್ದಾರೆ.
ತಮ್ಮ ತಟ್ಟೆಯಲ್ಲೇ ಭ್ರಷ್ಟಾಚಾರ ವೆಂಬ ಹೆಗ್ಗಣ ಬಿದ್ದಿದ್ದರೂ ಸಹ ಬೇರೆಯವರ ತಟ್ಟೆಯಲ್ಲಿ ಬಿದ್ದಿರುವ ನೊಣದ ಬಗ್ಗೆಯೇ ದಿನ ನಿತ್ಯ ಟೀಕೆ ಮಾಡುತ್ತಾ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ತಾವು, ತಮ್ಮ ಸರ್ಕಾರದ ಅವಯಲ್ಲಿ ನಡೆದಿರುವ 97 ಬೃಹತ್ ಹಗರಣ ಗಳಿಗೆ ಸಂಬಂಸಿದಂತೆ – ಪ್ರತಿಯೊಂದು ಹಗರಣಗಳ ಸಂಪೂರ್ಣ ದಾಖಲೆಗಳನ್ನು ಖುದ್ದಾಗಿ ತಮ್ಮ ಅಂದಿನ ಅಧಿಕೃತ ಕಚೇರಿಗೆ ತಲುಪಿಸಿದ್ದರೂ ಸಹ ಆ ಹಗರಣಗಳ ಬಗ್ಗೆ ಎಂದೂ ತುಟಿಯನ್ನೇ ಬಿಚ್ಚಲಿಲ್ಲ.
ತಮ್ಮದೇ ಸರ್ಕಾರದಲ್ಲಿ ಸಚಿವರಾಗಿದ್ದ 13 ಮಂದಿ ಸಚಿವರುಗಳ ಮೇಲೆ ವಿವಿಧ ನ್ಯಾಯಾಲಯಗಳ ಆದೇಶದಂತೆ ವಿವಿಧ ತನಿಖಾ ಸಂಸ್ಥೆಗಳು ದೂರು ದಾಖಲಿಸಿದ್ದರೂ ಸಹ, ಅಂತಹ ಭ್ರಷ್ಟ ಸಚಿವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ನೀವು ಮಾಧ್ಯಮಗಳ ಸಮಕ್ಷಮದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ಧಾರೆ.