ದೇಶ ವಿಭಜಿಸುವ ಶಕ್ತಿಗಳಿಗೆ ತಕ್ಕಶಾಸ್ತಿ : ಅಜಿತ್ ದೇವಲ್

Social Share

ನವದೆಹಲಿ, ಜು.31- ದೇಶವನ್ನು ವಿಭಜಿಸುವ ವಿಚ್ಛಿದ್ರಕಾರಿ ಶಕ್ತಿಗಳನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವಲ್, ಪಿಎಫ್‍ಐ ಹಾಗೂ ಅದರ ಅಂಗಸಂಸ್ಥೆಗಳ ನಿಷೇಧದ ಸುಳಿವು ನೀಡಿದ್ದಾರೆ.

ಧರ್ಮದ ಹೆಸರಿನಲ್ಲಿ ಕೆಲವು ಸಂಘಟನೆಗಳು ಮತೀಯವಾದವನ್ನು ಹುಟ್ಟುಹಾಕಿ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿವೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕಾಂತಿಲಾಲ್ ಹತ್ಯೆ, ಮಹಾರಾಷ್ಟ್ರದ ಔಷಧಿ ವ್ಯಾಪಾರಿ ಉಮೇಶ್‍ರ ಕಗ್ಗೋಲೆ, ಮಂಗಳೂರಿನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.

ಬಿಹಾರ ಪಾಟ್ನಾದಲ್ಲಿ ಸ್ಥಳೀಯ ಪೊಲೀಸರು ನಡೆಸಿದ ದಾಳಿಯಲ್ಲಿ ದೇಶ ವಿರೋಧಿ ಚಟುವಟಿಕೆಗಳಿಗೆ ಸಜ್ಜುಗೊಂಡಿರುವ ನೀಲಿನಕ್ಷೆ ಪತ್ತೆಯಾಗಿದೆ. ಸ್ಫೋಟ ಸೇರಿದಂತೆ ಹಲವು ದುಷ್ಕøತ್ಯಗಳಿಗೆ ವಿದೇಶಗಳಿಂದ ಬಿಟ್ ಕಾಯಿನ್ ಮೂಲಕ ಹಣ ರವಾನೆಯಾಗಿರುವುದು ವರದಿಯಾಗಿದೆ. ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹತ್ಯೆಗಳಲ್ಲಿ ಪಿಎಫ್‍ಐ ಮತ್ತು ಅದರ ಅಂಗ ಸಂಸ್ಥೆಗಳ ಕಾರ್ಯಕರ್ತರು ಭಾಗಿಯಾಗಿರುವ ಆರೋಪಗಳಿವೆ.

ಬಿಹಾರದಲ್ಲಿ ಪತ್ತೆಯಾದ ಸ್ಲಿಪರ್‍ಸೆಲ್‍ನಲ್ಲಿ ದೇಶದ್ಯಂತ 200 ಮಿಲಿಟಿನ್‍ಗಳು ವಿದೇಶಗಳಲ್ಲಿ ತರಬೇತಿ ಪಡೆದು ಬಂದಿದ್ದು, ಸ್ಥಳೀಯ ಯುವಕರನ್ನು ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳಲು ಮತ್ತು ದುಷ್ಕøತ್ಯಗಳಿಗೆ ಪ್ರಚೋದಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ದೇಶದ ದಕ್ಷಿಣ ಭಾಗದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿಯೂ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳು ಮತೀಯ ಸಂಘಟನೆಗಳನ್ನು ನಿಷೇಧ ಮಾಡಬೇಕೆಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ತಯಾರಿ ನಡೆಸಿವೆ.

ರಾಜಕೀಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಸಂಘಟನೆಗಳನ್ನು ಹೊರತುಪಡಿಸಿ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆ ನಡೆಸುವ ಮೂಲಕ ಹಾದಿ ತಪ್ಪಿಸುವ ಸಂಘಟನೆಗಳನ್ನು ನಿಷೇಧಿಸುವುದು ಸೂಕ್ತ ಎಂದು ಚರ್ಚೆಯಾಗಿದೆ.

ಸಭೆಯಲ್ಲಿ ಮಹತ್ವದ ಚರ್ಚೆ:
ನಿನ್ನೆ ದೆಹಲಿ ಸಾಂವಿಧಾನಿಕ ಕ್ಲಬ್‍ನ ಅಂತರ್ ಧರ್ಮೀಯ ಸೌಹಾರ್ದತಾ ಸಭೆ ನಡೆಸಿದ ಅಜಿತ್ ದೇವಲ್ ಅವರ ಬಳಿ ಸೂಫಿ ಸಂತರು ಪಿಎಫ್‍ಐ ನಿಷೇಧಿಸುವಂತೆ ಹಾಗೂ ಶಾಂತಿ ಸೌಹಾರ್ದತೆಯನ್ನು ಕದಡುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿರುವ ಅಜಿತ್‍ದೇವಲ್, ನಾವು ದೇಶವನ್ನು ವಿಭಜಿಸುವ, ಕೋಮು ಸಂಘರ್ಷ ಸೃಷ್ಟಿಸುವವರನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಪ್ರಗತಿಪರ ಭಾರತದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಸಂಘಟನೆಗಳ ವಿರುದ್ಧ ಧ್ವನಿ ಎತ್ತಬೇಕಿದೆ. ತಮ್ಮದೇ ಆದ ಸಿದ್ಧಾಂತಗಳು ಹಾಗೂ ಧರ್ಮಗಳ ಹೆಸರಿನಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಾವು ಮೌನವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಸಂಘಟನೆಗಳ ತಪ್ಪುಗಳ ಆಧಾರದ ಮೇಲೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಭಾರತದಲ್ಲಿ ನಾವೇಲ್ಲಾ ಒಗ್ಗಟ್ಟಾಗಿದ್ದೇವೆ, ಇದು ನಮ್ಮಗೆ ಹೆಮ್ಮೆಯ ಸಂಗತಿಯಾಗಿದೆ. ಪ್ರತಿಯೊಂದು ಧರ್ಮಕ್ಕೂ ಇಲ್ಲಿ ಸ್ವತಂತ್ರ್ಯವಿದೆ. ಕೆಲವೇ ಕೆಲವು ಸಮಾಜ ಘಾತುಕ ಶಕ್ತಿಗಳು ಹಿಂದೆ ನಿಂತು ಸಾಮರಸ್ಯವನ್ನು ಹಾಳು ಮಾಡುತ್ತಿವೆ ಎಂದು ಖಂಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಮಾತನಾಡಿರುವ ಧರ್ಮಗುರು ಹಜರತ್ ಸಯದ್ ನಾಸೀರುದ್ದಿನ್ ಚೆಸ್ಟಿ, ತಲೆ ಕಡಿಯುವುದು ಇಸ್ಲಾಂಗೆ ವಿರುದ್ಧವಾಗಿದೆ. ಅದು ತಾಲಿಬಾನಿಗಳ ಆಲೋಚನೆ, ಇಂದು ಆಲೋಚನೆಗಳನ್ನು ಮುಚ್ಚಿದ ಕೋಣೆಯ ಬದಲಿಗೆ ಬಯಲಿನಲ್ಲೇ ಎದುರಿಸಬೇಕು ಎಂದು ಹೇಳಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Articles You Might Like

Share This Article