ವೀರಗಲ್ಲುಗಳು ಮತ್ತು ಶಾಸನ ಪತ್ತೆಹಚ್ಚಿದ NSS ವಿದ್ಯಾರ್ಥಿಗಳು

ಮಾಗಡಿ, ಮೇ 28- ತಾಲ್ಲೂಕಿನ ಶ್ರೀಕ್ಷೇತ್ರ ಭಕ್ತಮುನೇಶ್ವರ ಕಳ್ಳಿಪಾಳ್ಯದಲ್ಲಿ ಬೆಂಗಳೂರಿನ ಭೈರವೇಶ್ವರ ನಗರದ ಬಿಬಿಎಂಪಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ ನಡೆಯುತ್ತಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾಗ ವೀರಗಲ್ಲುಗಳು ಮತ್ತು ಶಾಸನವನ್ನು ಪತ್ತೆ ಮಾಡಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಶಾಸನ ಮತ್ತು ವೀರಗಲ್ಲುಗಳನ್ನು ಪರಿಶೀಲಿಸಿದ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ ಮಾತನಾಡಿ, ವಿಜಯನಗರ ಪೂರ್ವ ಕಾಲದ ಜಯ ಸಂವತ್ಸರದಲ್ಲಿ ಚನ್ನಮ್ಮ ನಾಯಕಿಯ ಮಗ ಬೀರಪ್ಪ ನಾಯಕ ಎಂಬ ಪಾಳೇಗಾರ ಕಳ್ಳಿಪಾಳ್ಯವನ್ನು ಎರವಗೌಡ ಎಂಬಾತನಿಗೆ ಉಂಬಳಿ ಮಾನ್ಯ ಮಾಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಶಾಸನದ ಪಕ್ಕದಲ್ಲಿಯೇ ತುರುಗೋಳ್ ವೀರಗಲ್ಲು ಇದೆ. ಮಾದಗೊಂಡನಹಳ್ಳಿಗೆ ಸೇರಿದ ಕಳ್ಳಿಪಾಳ್ಯದ ಊರಮುಂದಿನ ಆಲದ ಮರದ ಕೆಳಗೆ ವೀರಗಲ್ಲು ಪತ್ತೆಯಾಗಿದೆ. ಅದೇ ಗ್ರಾಮದ ಬಳಿ ಗುಡ್ಡನ ಹೊಲದಲ್ಲಿ ಮತ್ತೊಂದು ಶಾಸನವಿದ್ದು, ಎಪಿಗ್ರಾಫಿಯ ಆಫ್ ಕರ್ನಾಟಕದಲ್ಲಿ ಬಿಎಲ್ ರೈಸ್ ಈ ಗ್ರಾಮಕ್ಕೆ ಹಿಂದೆ ಭೇಟಿ ನೀಡಿ ಎರಡು ಶಾಸನಗಳನ್ನು ದಾಖಲು ಮಾಡಿದ್ದಾರೆ.

ಮಾಗಡಿ ಶಾಸನ 46 ಮತ್ತು 47 ಎಂದಿದೆ. ವಿನಾಶದ ಅಂಚಿನಲ್ಲಿರುವ ಶಾಸನಗಳ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಿ, ತುರುಗೋಳ್ ವೀರಗಲ್ಲುಗಳನ್ನು ಮತ್ತು ಚಿನ್ನರಗುಟ್ಟೆ ಬೈಲಿನಲ್ಲಿ ಅನಾಥವಾಗಿ ನೆಲದ ಮೇಲೆ ಬಿದ್ದಿರುವ 5 ಮಹತ್ವದ ವೀರಗಲ್ಲುಗಳನ್ನು ರಕ್ಷಿಸಬೇಕಿದೆ ಎಂದರು.

ಭಕ್ತಮುನೇಶ್ವರ ಕ್ಷೇತ್ರದ ಧರ್ಮಾಕಾರಿ ರಂಗನಾಥಾನಂದ ಸ್ವಾಮಿಜಿ ಎನ್.ಎಸ್.ಎಸ್. ಶಿಬಿರಾರ್ಥಿಗಳು ವೀರಗಲ್ಲುಗಳ ಸುತ್ತ ಸ್ವಚ್ಚತೆ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಶಾಸನ ಮತ್ತು ವೀರಗಲ್ಲುಗಳನ್ನು ನೋಡಿ, ನಮ್ಮೂರಿನ ಪೂರ್ವಿಕರ ಬಹುದೊಡ್ಡ ಬದುಕನ್ನು ಅನಾವರಣಗೊಳಿಸುವ ಶಿಲಾ ಶಾಸನಗಳು ಮತ್ತು ವೀರಗಲ್ಲುಗಳನ್ನು ಪತ್ತೆ ಮಾಡಿರುವ ಶಿಬಿರಾರ್ಥಿಗಳ ಶ್ರಮ ಸ್ಮರಣೀಯವಾದುದು, ಸ್ಮಾರಕಗಳನ್ನು ರಕ್ಷಿಸುವ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದರು.

ಶಿಬಿರಾಧಿಕಾರಿ ಡಾ.ರಾಧಾಕೃಷ್ಣ ವಿ.ಮಾತನಾಡಿ, ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ ನಮ್ಮ ವಿದ್ಯಾರ್ಥಿನಿಯರಿಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ಶಿಬಿರಾರ್ಥಿಗಳು ಐತಿಹಾಸಿಕ ಪ್ರಜ್ಞೆ ಬೆಳೆಸಿಕೊಳ್ಳಲು ಮತ್ತು ಗ್ರಾಮದ ಮಹತ್ವಕ್ಕೆ ಮೆರುಗು ಬಂದಿದೆ ಎಂದರು.

ಭಕ್ತಮುನೇಶ್ವರ ಶ್ರೀಕ್ಷೇತ್ರ ಟ್ರಸ್ಟ್‍ನ ಕಾರ್ಯದರ್ಶಿ ಆನಂದ್, ಭಕ್ತಮುನೇಶ್ವರಸ್ವಾಮಿ ದೇವಾಲಯದ ಅರ್ಚಕರಾದ ರಾಮಕೃಷ್ಣಯ್ಯ, ಹೇಮಂತ್, ಬಿಎಂಎಸ್ ಶಾಲೆಯ ಮುಖ್ಯಶಿಕ್ಷಕ ರಂಗನಾಥ್, ಸಹಾಯಕ ಪ್ರಾಧ್ಯಾಪಕರಾದ ಮಂಜುಳ, ಪೂಜಾ, ನಾಗರಾಜು ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಇದ್ದರು.