ಗುಂಟೂರು, ಜ.3- ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್.ಟಿ.ರಾಮ್‍ರಾವ್‍ರ ಪ್ರತಿಮೆಯನ್ನು ಭಗ್ನಗೊಳಿಸಲು ಪ್ರಯತ್ನಿಸಿದ ಶಾಸಕರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಗುಂಟೂರಿನ ದುರ್ಗಿ ಗ್ರಾಮದಲ್ಲಿರುವ ಎನ್.ಟಿ. ರಾಮರಾವ್‍ರ ಪ್ರತಿಮೆಯನ್ನು ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ (ವೈಎಸ್‍ಆರ್‍ಸಿಪಿ)ಯ ಶೆಟ್ಟಿಪಿಳ್ಳೈ ಕೋಟೇಶ್ವರ ರಾವ್ ಅವರು ಸುತ್ತಿಗೆಯನ್ನು ಬಳಸಿ ಭಗ್ನಗೊಳಿಸಲು ಯತ್ನಿಸಿದ್ದಾರೆ.
ನಂದಮೂರಿ ತರಕಾ ರಾಮರಾವ್ ತೆಲುಗು ಚಿತ್ರರಂಗದ ಶ್ರೇಷ್ಠ ಕಲಾವಿದರಾಗಿದ್ದರಲ್ಲದೆ, 1983 ರಿಂದ 1995ರವರೆಗೂ 3 ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಪಾಲಿನ ಮೆಚ್ಚಿನ ನಾಯಕರಾಗಿದ್ದರು.
ಎನ್‍ಟಿಆರ್‍ರ ಮೊಮ್ಮಗ, ಟಿಡಿಪಿ ಸಹ ಕಾರ್ಯದರ್ಶಿ ಹಾಗೂ ಎಂಎಲ್‍ಸಿ ನಾರಾ ಲೋಕೇಶ್ ಅವರು ತಮ್ಮ ತಾತ ಹಾಗೂ ರಾಜ್ಯದ ಮುಖ್ಯಮಂತ್ರಿಯೊಬ್ಬರ ಪ್ರತಿಮೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ ವೈಸಿಪಿ ನಾಯಕ ಹಾಗೂ ಮಚ್‍ರಲಾ ಕ್ಷೇತ್ರದ ಶಾಸಕ ಶೆಟ್ಟಿಪಿಳ್ಳೈ ಕೊಟೇಶ್ವರರಾವ್ ಅವರ ಧೋರಣೆಯನ್ನು ಖಂಡಿಸಿದ್ದು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದಿವಂಗತ ಎನ್‍ಟಿಆರ್‍ರ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು ಶೆಟ್ಟಿಪಿಳ್ಳೈ ಕೊಟೇಶ್ವರರಾವ್‍ರವರ ಮೇಲೆ ಎಫ್‍ಐಆರ್ ಅನ್ನು ದಾಖಲಿಸಿದ್ದಾರೆ.
