ಡ್ರಗ್ಸ್ ಪಟ್ಟಿಗೆ ಅಡಿಕೆ ಸೇರ್ಪಡೆ : ಸರ್ಕಾರಕ್ಕೆ ಶಾಸಕರ ತರಾಟೆ

ಬೆಂಗಳೂರು,ಜ.29- ಅಡಿಕೆಯನ್ನು ಡ್ರಗ್ಸ್ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಹಲವು ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ಜರುಗಿತು. ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರು ವಿಷಯ ಪ್ರಸ್ತಾಪಿಸಿ, ಮಾದಕವಸ್ತು ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರ್ಪಡೆ ಮಾಡಿರುವುದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ಸರ್ಕಾರ ಇದನ್ನು ಸೇರಿಸಿದೆಯೇ ಇಲ್ಲವೇ ಅಧಿಕಾರಿಗಳು ಸೇರಿಸಿದ್ದಾರೆಯೇ? ಸುಗ್ಗಿ ಕಾಲದಲ್ಲಿ ಈ ರೀತಿ ಮಾಡುವುದರಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಮತ್ತೊಬ್ಬ ಶಾಸಕ ಅರಗ ಜ್ಞಾನೇಂದ್ರ 2 ಸಾವಿರ ರೂ.ನಷ್ಟು ಅಡಿಕೆ ಬೆಲೆ ಕುಸಿದಿದೆ. ಯಾರು ಡ್ರಗ್ಸ್ ಪಟ್ಟಿಗೆ ಸೇರ್ಪಡೆ ಮಾಡಿದವರು ಎಂಬ ಬಗ್ಗೆ ತನಿಖೆ ಆಗಬೇಕು. ಕೂಡಲೇ ಡ್ರಗ್ಸ್ ಪಟ್ಟಿಯಿಂದ ಅಡಿಕೆಯನ್ನು ಕೈಬಿಡಿ ಎಂದು ಆಗ್ರಹಿಸಿದರು.

ಯು.ಟಿ.ಖಾದರ್, ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಧ್ವನಿಗೂಡಿಸಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವೆಬ್‍ಸೈಟ್‍ನಲ್ಲಿ ತಪ್ಪಾಗಿ ಮುದ್ರಣವಾಗಿದೆ. ಅದನ್ನು ಸರಿಪಡಿಸುವ ಭರವಸೆ ನೀಡಿದರು.